ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಬಿಪಿಒ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಧರ್ಮಾಂತರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ನಿದಾ ಖಾನ್ ಎಂಬಾಕೆಗೆ ಆಶ್ರಯ ನೀಡಿದ ಆರೋಪದ ಮೇಲೆ ಎಐಎಂಐಎಂ (AIMIM) ಕಾರ್ಪೊರೇಟರ್ ಮತೀನ್ ಪಟೇಲ್ ಅವರನ್ನು ಪೊಲೀಸರು ಈಗ ಆರೋಪಿ ಎಂದು ಹೆಸರಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದರು. ತನಿಖೆಯ ವೇಳೆ, ಸಂಭಾಜಿನಗರದ (ನರೇಗಾಂವ್) ಕಾರ್ಪೊರೇಟರ್ ಮತೀನ್ ಪಟೇಲ್ ಅವರು ಈಕೆಗೆ ರಕ್ಷಣೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ನಾಸಿಕ್ ಪೊಲೀಸ್ ಕಮಿಷನರ್ ಸಂದೀಪ್ ಕರ್ಣಿಕ್ ಅವರು ಮತೀನ್ ಪಟೇಲ್ ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ಸೇರಿಸಿದ್ದಾರೆ. ಪಟೇಲ್ ಅವರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಫೆಬ್ರವರಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಾಸಿಕ್‌ನ ಟಿಸಿಎಸ್ ಬಿಪಿಒ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯೊಬ್ಬರಿಗೆ ಇಸ್ಲಾಂ ಪದ್ಧತಿಗಳನ್ನು ಅನುಸರಿಸುವಂತೆ ಒತ್ತಾಯಿಸಲಾಗುತ್ತಿತ್ತು ಮತ್ತು ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ದೂರು ದಾಖಲಾಗಿತ್ತು.








