ಕಲಬುರ್ಗಿ : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಕುರಿತಂತೆ ಭಾರಿ ಚರ್ಚೆ ನಡೆಯುತ್ತಿತ್ತು. ಇದೀಗ ಈ ಒಂದು ವಿಚಾರಕ್ಕೆ ಪುಷ್ಟೀಕರಣ ನೀಡುವಂತೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸುಳಿವು ನೀಡಿದ್ದು ಕಳೆದ ಹಲವು ದಿನಗಳಿಂದ ಬೇರೆ ರಾಜ್ಯಗಳಲ್ಲಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಲಾಗಿದ್ದು, ಮುಂದಿನ 8 ದಿನದಲ್ಲಿ ರಾಜ್ಯಗಳ ಅಧ್ಯಕ್ಷ ಸ್ಥಾನ ಬದಲಾವಣೆ ಪ್ರಕ್ರಿಯೆ ಮುಗಿಯಲಿದೆ ಎಂದು ಸುಳಿವು ನೀಡಿದ್ದಾರೆ.
ಕಲ್ಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಡಿಸ್ಸಾದಲ್ಲಿ ಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಅಲ್ಲಿ ಹಿಂದುಳಿದ ವರ್ಗದವರು ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಬೇರೆ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಅಧ್ಯಕ್ಷರ ಬದಲಾವಣೆ ಆಗುತ್ತದೆ. ಈ ಬಗ್ಗೆ ನಿರ್ದಿಷ್ಟವಾಗಿ ನಾನು ಹೇಳಲು ಆಗುವುದಿಲ್ಲ. ನಾವು ಒಂದೊಂದು ರಾಜ್ಯಗಳಲ್ಲಿ ಅಧ್ಯಕ್ಷರ ಬದಲಾವಣೆ ಮಾಡುತ್ತಿದ್ದೇವೆ. ಒಂದೆರಡು ದಿನದಲ್ಲಿ ಮತ್ತೆ ಒಂದೆರಡು ರಾಜ್ಯಗಳಲ್ಲಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುತ್ತೇವೆ 8 ದಿನಗಳಲ್ಲಿ ಎಲ್ಲಾ ಬದಲಾವಣೆ ಮುಗಿಯುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಇನ್ನು ಸಚಿವ ಸತೀಶ್ ಜಾರಕಿಹೊಳಿ ಭೇಟಿ ವಿಚಾರ ಕುರಿತು, ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದು ದೊಡ್ಡ ಮಾತ? ನಾನು ಎಐಸಿಸಿ ಅಧ್ಯಕ್ಷ ಎಲ್ಲರೂ ಬಂದು ನನ್ನನ್ನು ಭೇಟಿ ಮಾಡುತ್ತಾರೆ. ಅಲ್ಲದೆ ನಮ್ಮ ರಾಜ್ಯದವರಿಗೆ ಬೇಗ ಭೇಟಿಯಾಗಲು ಅವಕಾಶ ಸಿಗುತ್ತದೆ. ನಮ್ಮ ಭೇಟಿಗೆ ಬಂದವರಿಗೆ ಬೇಡ ಎಂದು ಹೇಳಲು ಆಗುತ್ತದ? ಜಿ ಪರಮೇಶ್ವರ್ ಬರುತ್ತಾರೆ, ಡಿಕೆ ಶಿವಕುಮಾರ್ ಬರ್ತಾರೆ, ಸತೀಶ್ ಜಾರಕಿಹೊಳಿ ಬರ್ತಾರೆ ಹಾಗೂ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಮಾತನಾಡುತ್ತಾರೆ. ಭೇಟಿಯಲ್ಲಿ ಯಾವುದೇ ರೀತಿಯಾದ ವಿಶೇಷ ಇಲ್ಲ. ಇದರಲ್ಲಿ ಊಹಾಪೋಹ ಸೃಷ್ಟಿಸಿ ಗೊಂದಲವನ್ನು ಸೃಷ್ಟಿ ಮಾಡಬೇಡಿ. ಇದರಿಂದ ನಮ್ಮ ನಾಯಕರು ಗೊಂದಲಕ್ಕೆ ಒಳಗಾಗುತ್ತಿದ್ದಾರರೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.