ನವದೆಹಲಿ: ಎಐ ಇಂಪ್ಯಾಕ್ಟ್ ಶೃಂಗಸಭೆ 2026 ರ ಸಂದರ್ಭದಲ್ಲಿ ಭಾರತ ಮಂಟಪದೊಳಗೆ “ಶರ್ಟ್ ರಹಿತ ಪ್ರತಿಭಟನೆ” ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಮತ್ತೊಬ್ಬ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಸದಸ್ಯನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಜಿತೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ, ಯಾದವ್ ಅವರು ಭಾರತೀಯ ಯುವ ಕಾಂಗ್ರೆಸ್ ನೊಂದಿಗೆ ನಂಟು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದುವರೆಗೂ ಪೊಲೀಸರು ನಡೆಸಿದ ಐದನೇ ಬಂಧನ ಇದಾಗಿದೆ. ಪ್ರತಿಭಟನಾ ಪ್ರಕರಣದ ತನಿಖೆಯ ಭಾಗವಾಗಿ ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ನಾಲ್ವರು ಐವೈಸಿ ಸದಸ್ಯರನ್ನು ಐದು ದಿನಗಳ ಕಸ್ಟಡಿಗೆ
ಏತನ್ಮಧ್ಯೆ, ಎಐ ಶೃಂಗಸಭೆಯ ಸಂದರ್ಭದಲ್ಲಿ ಭಾರತ ಮಂಟಪದಲ್ಲಿ ಶರ್ಟ್ ರಿಲ್ಲದೆ ಪ್ರತಿಭಟನೆ ನಡೆಸಿದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ದೆಹಲಿ ನ್ಯಾಯಾಲಯ ಶನಿವಾರ ಅನುಮೋದಿಸಿದೆ.
ಐವೈಸಿಯ ನಡವಳಿಕೆಯು ಕಾನೂನುಬದ್ಧ ಭಿನ್ನಾಭಿಪ್ರಾಯವಲ್ಲ, ಬದಲಿಗೆ ಭಾರತದ ರಾಜತಾಂತ್ರಿಕ ವರ್ಚಸ್ಸಿಗೆ ಧಕ್ಕೆ ತರುವ “ಸಾರ್ವಜನಿಕ ಸುವ್ಯವಸ್ಥೆಯ ಮೇಲಿನ ನಿರ್ಲಜ್ಜ ದಾಳಿ” ಎಂದು ನ್ಯಾಯಾಲಯ ತೀವ್ರವಾಗಿ ಟೀಕಿಸಿತು.








