ಕೋಲ್ಕತ್ತಾ:ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಚುನಾವಣೆಯ ಫಲಿತಾಂಶ ಪ್ರಕಟವಾಗಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (TMC) ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಇಂದು ಭವಾನಿಪುರದಲ್ಲಿ ಪಕ್ಷದ ಪ್ರಮುಖ ಮತ್ತು ತಳಮಟ್ಟದ ನಾಯಕರೊಂದಿಗೆ ಹಠಾತ್ ತುರ್ತು ಸಭೆ ನಡೆಸಿದ್ದಾರೆ.
ಮತ ಎಣಿಕೆ ಕೇಂದ್ರಗಳಲ್ಲಿ ಪಕ್ಷದ ಏಜೆಂಟ್‌ಗಳು ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ಯಾವುದೇ ಅಕ್ರಮ ನಡೆಯದಂತೆ ಹೇಗೆ ಜಾಗರೂಕರಾಗಿರಬೇಕು ಎಂಬ ಬಗ್ಗೆ ದೀದಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಫಲಿತಾಂಶದ ನಂತರದ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಕಾರ್ಯಕರ್ತರು ಶಾಂತಿ ಕಾಪಾಡುವಂತೆ ಮಾಡಲು ಬ್ಲಾಕ್ ಮಟ್ಟದ ನಾಯಕರಿಗೆ ಮಮತಾ ಬ್ಯಾನರ್ಜಿ ಮಾರ್ಗದರ್ಶನ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸ್ವಕ್ಷೇತ್ರವಾದ ಭವಾನಿಪುರದಲ್ಲಿಯೇ ಈ ಸಭೆ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಹಲವು ಸುತ್ತುಗಳಲ್ಲಿ ನಡೆದ ಈ ಬಾರಿಯ ಬಂಗಾಳ ಸಮರದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಎಕ್ಸಿಟ್ ಪೋಲ್‌ಗಳು ಭಿನ್ನ ಫಲಿತಾಂಶಗಳನ್ನು ನೀಡಿರುವ ಹಿನ್ನೆಲೆಯಲ್ಲಿ, ಮಮತಾ ಬ್ಯಾನರ್ಜಿ ಅವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂಬುದು ಈ ಸಭೆಯ ಮೂಲಕ ಸ್ಪಷ್ಟವಾಗಿದೆ.








