ಬೆಂಗಳೂರು : ಈ ಹಿಂದೆ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಇಡೀ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಇದೀಗ ನೀರಾವರಿ ಇಲಾಖೆಯಲ್ಲೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿ ಬಂದಿದ್ದು, ಹಲವು ಅಭ್ಯರ್ಥಿಗಳು ಪಿಯುಸಿ ಫೇಲಾದರೂ ಕೂಡ ನಕಲಿ ಅಂಕಪಟ್ಟಿ ಸಲ್ಲಿಸಿ ನೀರಾವರಿ ಇಲಾಖೆಯಲ್ಲಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದೆ.
ಹೌದು ನೀರಾವರಿ ಇಲಾಖೆಯ ಹೊಸ ಆಯ್ಕೆ ಪಟ್ಟಿಯಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹಲವು ಅಭ್ಯರ್ಥಿಗಳು ನಕಲಿ ದಾಖಲೆ ಸಲ್ಲಿಸಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಇದೇ ವರ್ಷ ಜೂನ್ 27 ರಂದು ಹೊಸದಾಗಿ 182 ಅಭ್ಯರ್ಥಿಗಳ ತಾತ್ಕಾಲಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಆಯ್ಕೆಯಾದ 182 ಅಭ್ಯರ್ಥಿಗಳಲ್ಲಿ 62 ಜನರು ನಕಲಿ ಅಂಕಪಟ್ಟಿಯನ್ನು ನೀಡಿದ್ದಾರೆ ಎಂದು ಕೆಲ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ.
2022ರ ಅಕ್ಟೋಬರ್ನಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ಲಾಗ್ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ದ್ವಿತೀಯ ಪಿಯುಸಿ, ಸಿಬಿಎಸ್ಸಿ ಮತ್ತು ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಈ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಯಾವುದೇ ಪರೀಕ್ಷೆ ಇರಲಿಲ್ಲ. ಈ ಹುದ್ದೆಗೆ ನಕಲಿ ಅಂಕಪಟ್ಟಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸಲಾಗಿತ್ತು.
ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಅಂಕಪಟ್ಟಿಗೆ ನೀಡಿದ ಶಹಾಪುರ ತಾಲೂಕಿನ ಹಾರಣಗೇರಾ ಗ್ರಾಮದ ರವಿಕುಮಾರ ಎಂಬುವವರಿಗೆ ಸಿಸಿಬಿ ನೋಟಿಸ್ ನೀಡಿದೆ.ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವವರನ್ನು ತನಿಖೆಗೆ ಒಳಪಡಿಸಬೇಕು. ಅದರಲ್ಲಿ ಮತ್ತಷ್ಟು ಜನ ಸಿಕ್ಕಿಕೊಳ್ಳುತ್ತಾರೆ. ನ್ಯಾಯಯುತವಾದ ಆಯ್ಕೆ ಪ್ರಕ್ರಿಯೆ ನಡೆಯಬೇಕು. ತನಿಖೆ ಮಾಡಿದರೆ 182 ಜನರಲ್ಲಿ 100 ಜನ ಬೋಕಸ್ ಇರುವವರು ಸಿಗುತ್ತಾರೆ ಎಂದು ನೊಂದ ಅಭ್ಯರ್ಥಿಗಳು ಹೇಳಿದ್ದಾರೆ.