ಪ್ರಯಾಗ್‌ರಾಜ್: “ವಯಸ್ಕರಾದ ಮೇಲೆ ವ್ಯಕ್ತಿಗಳು ತಮಗೆ ಇಷ್ಟಬಂದವರ ಜೊತೆ, ಇಷ್ಟಬಂದ ಜಾಗದಲ್ಲಿ ವಾಸಿಸುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ” ಎಂದು ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಲಿವ್-ಇನ್ ಸಂಬಂಧದಲ್ಲಿದ್ದ ಜೋಡಿಯೊಂದಕ್ಕೆ ಅವರ ಕುಟುಂಬದವರಿಂದಲೇ ಪ್ರಾಣ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಕೋರ್ಟ್ ಈ ರಕ್ಷಣೆ ನೀಡಿದೆ.
ಇಬ್ಬರು ವ್ಯಕ್ತಿಗಳು ವಯಸ್ಕರಾಗಿದ್ದರೆ (ಮೇಜರ್), ಅವರು ಮದುವೆಯಾಗಲಿ ಅಥವಾ ಲಿವ್-ಇನ್ ಸಂಬಂಧದಲ್ಲಿರಲಿ, ಅವರ ಖಾಸಗಿ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಹಕ್ಕಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.ಅರ್ಜಿದಾರರ ಪೋಷಕರು ಅಥವಾ ಸಂಬಂಧಿಕರು ಅವರ ಶಾಂತಿಯುತ ಜೀವನಕ್ಕೆ ಅಡ್ಡಿಪಡಿಸಬಾರದು ಮತ್ತು ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಕಿರುಕುಳ ನೀಡಬಾರದು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ.
ದಂಪತಿಗೆ ಯಾವುದೇ ಅಪಾಯ ಎದುರಾದರೆ ತಕ್ಷಣವೇ ಸ್ಥಳೀಯ ಪೊಲೀಸರು ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.ಭಾರತೀಯ ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬ ನಾಗರಿಕನಿಗೂ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿದೆ. ಇದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.








