ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 19 ರಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಇದೀಗ ಇಂದಿನ ಕಲಾಪಕ್ಕೆ ತೆರೆ ಬಿದ್ದಿದೆ. ವಿಧಾನಸಭೆ ಕಲಾಪ ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಸರಿಯಾಗಿ ಸಾರಿಗೆ ಬಸ್ ಇಲ್ಲದೇ, ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರು ಸಮಸ್ಯೆಗೆ ಸಿಲುಕುವಂತೆ ಆಗಿದೆ. ಕೂಡಲೇ ಸಾರಿಗೆ ಬಸ್ ಸಮಸ್ಯೆಯನ್ನು ಸರಿಪಡಿಸಬೇಕು ಎಂಬುದಾಗಿ ವಿಪಕ್ಷದ ಸದಸ್ಯರು ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು. ಸಾರಿಗೆ ಸಚಿವರ ಉತ್ತರದ ಬಳಿಕವೂ ತೃಪ್ತಿಗೊಳ್ಳದಂತ ಸದಸ್ಯರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಹೀಗಾಗಿ ಕೆಲ ಕಾಲ ಸದನವನ್ನು ಮುಂದೂಡಿಕೆ ಬಳಿಕ, ಮತ್ತೆ ಆರಂಭಿಸಿದಂತ ಘಟನೆಯೂ ನಡೆಯಿತು. ಇಂದು ವಿಧಾನಸಭೆಯಲ್ಲಿ ಸಾರಿಗೆ ಬಸ್ ಗಳ ಸಮಸ್ಯೆ ಪ್ರತಿಧ್ವನಿಸಿತು. ಅಲ್ಲದೇ ಸಮರ್ಪಕ ಬಸ್ ವ್ಯವಸ್ಥೆಗಾಗಿ ಸದನದಲ್ಲಿ ಸದಸ್ಯರು ಒತ್ತಾಯಿಸಿದ್ದಲ್ಲೇ, ಪ್ರತಿಭಟನೆಯನ್ನು ನಡೆಸಿದರು. ಶಾಸಕ ಸಿದ್ದು ಸವದಿಯವರು ಎತ್ತಿದಂತ ಬಸ್ ಸಮಸ್ಯೆಗೆ, ಇತರೆ ಸದಸ್ಯರು ಕೂಡ ಧ್ವನಿಗೂಡಿಸಿದರು. ಆಗ ಸ್ಪೀಕರ್ ಸಚಿವರು ಸ್ಪಷ್ಟನೆಗೆ ಸೂಚಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಂಬಂಧ ನಾಳೆ ಸಂಜೆ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ನಾಳೆ ಸಂಜೆ ಸುವರ್ಣಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಯ ಮತ್ತೆ ಪಾದಯಾತ್ರೆ ಹೋರಾಟ ಆರಂಭಿಸಿದೆ. ರಾಜ್ಯ ಸರ್ಕಾರ ಕೊಟ್ಟ ಮಾತು ತಪ್ಪಿದ ಹಿನ್ನೆಲೆಯಲ್ಲಿ ಮತ್ತೆ ಪಾದಯಾತ್ರೆ ಆರಂಭಿಸಿದ್ದೇವೆ.ಸುವರ್ಣ ವಿಧಾನಸೌಧ ತಲುಪುವುದರೊಳಗಾಗಿ ಮೀಸಲಾತಿ ಘೋಷಣೆ ಮಾಡಿ ಇಲ್ಲವಾದಲ್ಲಿ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.