ದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ಅವಹೇಳನೆ ಮಾಡಿದೆ ಎಂದು ಆರೋಪಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಲೋಕಸಭೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಮುರ್ಮು ಅವರನ್ನು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರು ‘ರಾಷ್ಟ್ರಪತ್ನಿ” ಎಂದು ಸಂಬೋಧಿಸುವ ಮೂಲಕ ಅವರನ್ನು ಅವಮಾನಿಸಿದ್ದಾರೆ ಎಂದು ಇರಾನಿ ಆರೋಪಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಸಂಸತ್ ಆವರಣದಲ್ಲಿ ಮತ್ತೊಂದು ಪ್ರತಿಭಟನೆ ನಡೆದಿದೆ. ಫಲಕಗಳನ್ನು ಹಿಡಿದ ಬಿಜೆಪಿ ಸಂಸದರು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೌಧುರಿ ಅವರ ಹೇಳಿಕೆ ‘ಸೆಕ್ಸಿಸ್ಟ್ ಅವಮಾನ’ ಎಂದು ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಕಿಡಿಕಾರಿದ್ದಾರೆ.ತಾವು ಬಾಯ್ತಪ್ಪಿ ಆ ರೀತಿ ಹೇಳಿರುವುದಾಗಿ ತಿಳಿಸಿರುವ ಅಧೀರ್ ರಂಜನ್ ಚೌಧುರಿ ಅವರು ಕ್ಷಮೆ ಯಾಚಿಸಿದ್ದಾರೆ. ಬಿಜೆಪಿಯವರು ಚಿಕ್ಕ ಸಂಗತಿಯನ್ನು ದೊಡ್ಡ ಬೆಟ್ಟದಂತೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಚೌಧುರಿ ಅವರು ಈಗಾಗಲೇ ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ ಎಂದು ಹೇಳಿದ್ದಾರೆ.ಸೋನಿಯಾ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸ್ಮೃತಿ ಇರಾನಿ, ಅವರಿಂದಲೂ ಕ್ಷಮೆಗೆ ಆಗ್ರಹಿಸಿದ್ದಾರೆ. “ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಮಹಿಳೆಗೆ ಅವಮಾನ ಮಾಡಲು ಸೋನಿಯಾ ಗಾಂಧಿ ಅವಕಾಶ ನೀಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
“ಸೋನಿಯಾ ಅವರು ಆದಿವಾಸಿ ವಿರೋಧಿ, ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ” ಎಂದು ಸ್ಮೃತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೌಧುರಿ ಅವರ ಹೇಳಿಕೆಯು ಉದ್ದೇಶಪಪೂರ್ವಕವಾಗಿ ಮಾಡಿರುವ ಸೆಕ್ಸಿಸ್ಟ್ ನಿಂದನೆ ಎಂದಿರುವ ನಿರ್ಮಲಾ ಸೀತಾರಾಮನ್, “ಸ್ವತ ಮಹಿಳೆಯಾಗಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ, ತಮ್ಮ ನಾಯಕನಿಗೆ ಈ ರೀತಿ ಮಾತನಾಡಲು ಅವಕಾಶ ನೀಡಿದ್ದಾರೆ. ಇದಕ್ಕಾಗಿ ಅವರು ಕ್ಷಮೆ ಯಾಚಿಸುವಂತೆ ನಾನು ಒತ್ತಾಯಿಸುತ್ತೇನೆ. ಸೋನಿಯಾ ಗಾಂಧಿ ಅವರು ದೇಶದ ಮುಂದೆ ಬರಬೇಕು ಮತ್ತು ರಾಷ್ಟ್ರಪತಿ ಅವರನ್ನು ಅವಮಾನಿಸಿದ್ದಕ್ಕೆ ಕ್ಷಮೆ ಕೋರಬೇಕು” ಎಂದು ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧುರಿ ಅವರು ವಿವಿಧ ವಿಚಾರಗಳ ಕುರಿತು ಪಕ್ಷ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡುವಾಗ ರಾಷ್ಟ್ರಪತಿ ಕುರಿತು ಹೇಳಿಕೆ ನೀಡಿದ್ದರು.