ಬೆಳಗಾವಿ : ಜೈಲಿನಲ್ಲಿ ಬಿಂದಾಸ್ ಆಗಿ ಕಾಲ ಕಳೆಯುತ್ತಿರುವ ನಟ ದರ್ಶನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗಾವಿ ಹಿಂಡಲಗಾ ಸೆಂಟ್ರಲ್ ಜೈಲಿಗೆ ಅಥವಾ ಬಳ್ಳಾರಿಯ ಸೆಂಟ್ರಲ್ ರೈಲಿಗೆ ಶಿಫ್ಟ್ ಮಾಡುವ ಕುರಿತಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಆ ಕುರಿತು ಇನ್ನು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಟ ದರ್ಶನನ್ನು ಬೇರೆ ಕಡೆಗೆ ಶಿಫ್ಟ್ ಮಾಡಬೇಕಾ ಬೇಡ ಅಂತ ಎನ್ನುವ ಯೋಚನೆ ಇದೆ. ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದಿರತಕ್ಕಂತಹ ಕೆಲಸ ಆಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ಹಣ ತೆಗೆದುಕೊಂಡು ಈ ಕೆಲಸ ಮಾಡಿದ್ದರೋ ಅಥವಾ ಏನು ಮಾಡಿದ್ದಾರೊ ಗೊತ್ತಿಲ್ಲ ತನಿಖೆ ಮಾಡಿಸುತ್ತೇವೆ. ಆದರೆ ಈಗಾಗಲೇ 7 ಜನರನ್ನು ಅಮಾನತು ಮಾಡಿದ್ದೇವೆ. ಇನ್ನು ಈ ಪ್ರಕಾರನದಲ್ಲಿ ಯಾರ್ಯಾರು ಹಿರಿಯ ಅಧಿಕಾರಿಗಳು ಇದ್ದಾರೆ ಅವರ ವಿರುದ್ಧ ತನಿಖೆ ಮಾಡಿ ತಪ್ಪಿತಸ್ಥರಾಗಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನು ಈ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಣ ಇದ್ದವರಿಗೆ ಈ ರೀತಿ ಎಲ್ಲಾ ಆತಿಥ್ಯ ನೀಡಲಾಗುತ್ತದೆ ಎಂದು ಹೇಳಿಕೆ ನೀಡಿದರು. ಈ ಒಂದು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಮೊದಲು ಜೋಶಿ ಯಾರ ಪರ ಇದ್ದಾರೆ? ನಾವು ಜನರ ಪರ ಇಲ್ಲ ಸರಿ. 5 ಗ್ಯಾರಂಟಿಗಳನ್ನ ಜಾರಿ ಮಾಡಿದ ಯಾರ ಪರ ಜಾರಿ ಮಾಡಿದ್ದೇವೆ? ಅವರು ಬಡವರಿಗೆ ಏನು ಮಾಡಿದ್ದಾರೆ? ಟೀಕೆ ಮಾಡಬೇಕು ಅಂತ ಇದೆ ಮಾಡ್ತಾರೆ ಅಷ್ಟೇ. ಗೃಹ ಸಚಿವರು ಜೈಲಿಗೆ ಭೇಟಿ ನೀಡಲಿದ್ದಾರೆ ಅವರು ಏನು ವರದಿ ಕೊಡುತ್ತಾರೆ ಅದರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.