ಉಡುಪಿ: ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ. ಈ ದೇವಾಲಯದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆಯಲಾಗಿತ್ತು. ಆ ಮೂಲಕ ಹಲವು ಭಕ್ತರಿಂದ ಹಣ ಪಡೆದು ವಂಚಿಸಲಾಗಿತ್ತು. ಇಂತಹ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಕೊಲ್ಲೂರು ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ವಂಚನೆ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಕೊಲ್ಲೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ರಾಜಸ್ಥಾನದ ತಿಜಾರಿ ಜಿಲ್ಲೆಯ ನಾಸಿರ್ ಹುಸೇನ್ ಬಂಧಿತ ಆರೋಪಿಯಾಗಿದ್ದಾನೆ. ಈತ ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ಆ ಮೂಲಕ ಭಕ್ತರಿಗೆ ವಂಚಿಸುತ್ತಿದ್ದನು.
ಅಧಿಕೃತ ವೆಬ್ ಸೈಟ್ ಹೋಲುವ ರೀತಿಯಲ್ಲಿ ನಕಲಿ ಸೈಟ್ ಕ್ರಿಯೇಟ್ ಮಾಡಿದ್ದನು. ಭಕ್ತರಿಂದ ಮುಂಗಡವಾಗಿ ರೂಮ್ ಬುಕ್ಕಿಂಗ್ ಮಾಡಿಸಿಕೊಳ್ಳುತ್ತಿದ್ದನು. ಸ್ಕ್ಯಾನರ್ ಮೂಲಕ ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚನೆ ಮಾಡುತ್ತಿದ್ದನು. ಈ ಹಿನ್ನಲೆಯಲ್ಲಿ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ದೂರು ನೀಡಿದ್ದರಿಂದ, ಆರೋಪಿಯನ್ನು ಬಂಧಿಸಲಾಗಿದೆ.








