ಬೆಂಗಳೂರು : ಕರ್ನಾಟಕ ರಾಜ್ಯ ಅಗ್ನಿ ಶಾಮಕ, ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಮೂಹ ಅಪಘಾತ ವಿಮಾ ಯೋಜನೆಯ ವಿಮಾ ಮೊತ್ತವನ್ನು ರೂ,20.00 ಲಕ್ಷದಿಂದ 50 ಲಕ್ಷಗಳವರೆಗೆ ಹೆಚ್ಚಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದನ್ವಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಗ್ನಿಶಾಮಕ ಹುದ್ದೆಯಿಂದ ನಿರ್ದೇಶಕರ ಹುದ್ದೆಯವರೆಗೆ ಮಾತ್ರ ಕರ್ತವ್ಯದ ಮೇಲಿರುವಾಗ ಮೃತಪಟ್ಟಲ್ಲಿ ಗುಂಪು ವಿಮಾ ಮೊತ್ತವನ್ನು ರೂ, 20.00 ಲಕ್ಷಗಳಿಂದ ರೂ. 50,00 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆಯನ್ನು ವಿಮಾ ಕಂಪನಿಗೆ ವಹಿಸದೇ ಆಕಸ್ಮಿಕ/ ಅಪಘಾತದಲ್ಲಿ ಮೃತಪಟ್ಟ ಕರ್ತವ್ಯ ನಿರತ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನೌಕರರ ಕುಟುಂಬಗಳಿಗೆ ನೀಡುವ ವಿಶೇಷ ಗುಂಪು ವಿಮಾ ಮೊತ್ತವನ್ನು ನೇರವಾಗಿ ಇಲಾಖೆಯ ಸಂಬಂಧಪಟ್ಟ ಲೆಕ್ಕಶೀರ್ಷಿಕೆಯಡಿ ಪಾವತಿ ಮಾಡಲು ಸೂಚಿಸಿ ಆದೇಶಿಸಲಾಗಿದೆ.
ಆದ್ದರಿಂದ ಸದರಿ ಸುತ್ತೋಲೆಯಲ್ಲಿ ನಮೂದಿರುವ ಸೇವಾ ಸೌಲಭ್ಯವನ್ನು ಎಲ್ಲಾ ಅಗ್ನಿಶಾಮಕ ಠಾಣಾಧಿಕಾರಿಗಳು ಹಾಜರಾತಿ (ರೋಲ್ ಕಾಲ್) ಸಮಯದಲ್ಲಿ ಕರ್ತವ್ಯ ನಿರತ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ.