ಬೆಂಗಳೂರು : ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಸುದ್ದಿ ಹಲವು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿಯಾಗಿಯೇ ಹರಿದಾಡುತ್ತಿದೆ. ಈ ರೀತಿಯ ಸುದ್ದಿ ಬಂದಾಗೆಲ್ಲ ಸುಮಲತಾ ಅಂಬರೀಶ್ ಅದನ್ನು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಮೊನ್ನೆಯಷ್ಟೇ ಅಭಿಷೇಕ್ ಅಂಬರೀಶ್ ಕೂಡ ಇದೆಲ್ಲ ಸುಳ್ಳು ಸುದ್ದಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಅಂಬರೀಶ್ ಕುಟುಂಬದ ಆಪ್ತರ ಪ್ರಕಾರ ಡಿಸೆಂಬರ್ 11 ರಂದು ಅಭಿಷೇಕ್ ಎಂಗೇಜ್ ಆಗಲಿದ್ದಾರೆ ಎನ್ನಲಾಗುತ್ತಿದೆ.
ಹಲವು ವರ್ಷಗಳಿಂದ ಪರಿಚಯವಿರುವ ತಮ್ಮ ಗೆಳತಿಯನ್ನೇ ಅಭಿಷೇಕ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ಖ್ಯಾತ ಫ್ಯಾಷನ್ ಡಿಸೈನರ್ ಪುತ್ರಿ ಎನ್ನುತ್ತವೆ ಆಪ್ತ ಮೂಲಗಳು. ಅಭಿಷೇಕ್ ಎಂಗೇಜ್ ಮೆಂಟ್ ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿದ್ದು, ಈಗಾಗಲೇ ರಜನಿಕಾಂತ್ ಸೇರಿದಂತೆ ದಕ್ಷಿಣದ ಹಲವು ದಿಗ್ಗಜರಿಗೆ ಆಹ್ವಾನ ಕೂಡ ಹೋಗಿದೆಯಂತೆ.
ಅಭಿಷೇಕ್ ಅಂಬರೀಶ್ ಅವರ ಸ್ನೇಹಿತೆಯಾಗಿರುವ ಅವಿದಾ ಬಿದ್ದಪ್ಪ ಅವರೇ ಅಭಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಇವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರು ಪುತ್ರಿಯಾಗಿದ್ದಾರೆ. ಹಲವು ವರ್ಷಗಳಿಂದ ಅಭಿಷೇಕ್ ಮತ್ತು ಅವಿದಾ ಫ್ರೆಂಡ್ಸ್ ಎನ್ನುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಈ ಗೆಳೆತನವೇ ಪ್ರೇಮಕ್ಕೆ ತಿರುಗಿ ಇದೀಗ ಹಸಮಣೆ ಹತ್ತಿಸುತ್ತಿದೆ.
ನಿನ್ನೆಯಷ್ಟೇ ಅಭಿಷೇಕ್ ಅವರ ಹೊಸ ಸಿನಿಮಾದ ಮುಹೂರ್ತವಾಗಿದ್ದು, ಈ ಚಿತ್ರಕ್ಕೆ ಕಾಳಿ ಎಂದು ಹೆಸರಿಡಲಾಗಿದೆ. ಮುಂಗಾರು ಮಳೆ ಖ್ಯಾತಿಯ ಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಭಿ ಅವರ ಎಂಗೇಜ್ ಮೆಂಟ್ ಮುಗಿದ ನಂತರ ಚಿತ್ರೀಕರಣ ಶುರು ಆಗಲಿದೆ. ಅಲ್ಲದೇ, ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲೂ ಅಭಿ ನಟಿಸಿದ್ದು, ಈ ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿದೆ.