ಬೆಂಗಳೂರು: ನಾನು ಶಿಕ್ಷಣ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆ ಕಾಲಾವಧಿಯಲ್ಲಿ ಅಗತ್ಯವಿರುವ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರನ್ನು ನೇಮಕ ಮಾಡಿದ್ದೇನೆ. ಎಸ್ ಎಸ್ ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲೂ ಕನಿಷ್ಠ 33 ಅಂಕಗಳನ್ನು ತೆಗೆದುಕೊಂಡು ಉತ್ತೀರ್ಣ ಮಾಡುತ್ತೇವೆ ಎಂಬುದನ್ನು ಕೈಬಿಟ್ಟು, ಮುಂಚೆ ಇದ್ದ ಪದ್ಧತಿಯನ್ನೇ ಮುಂದುವರೆಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ, ಸಭಾಪತಿ ಬಸವರಾಜ ಹೊರಟ್ಟಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಸಂಬಂಧ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವಂತ ಅವರು, ಇತ್ತೀಚೆಗೆ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳಲ್ಲಿ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ತೆಗೆದುಕೊಂಡರೆ ಅವರನ್ನು ಉತ್ತೀರ್ಣ ಗೊಳಿಸುತ್ತೇವೆ ಎಂದು ಹೇಳಿಕೆ ನೀಡಿರುತ್ತೀರಿ. ಇದು ಬಹಳ ಖೇದಕರ ಸಂಗತಿಯಾಗಿದೆ ಎಂದಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಎದುರಿಸುವುದು ಒಂದು ಅವಿಸ್ಮರಣೀಯ ಹಾಗೂ ವಿಶೇಷ ಘಟ್ಟವಾಗಿರುತ್ತದೆ ಮತ್ತು ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಎದುರಿಸುವುದು ಅನೇಕ ಅನುಭವಗಳನ್ನು ಸಹ ನೀಡುತ್ತದೆ ಅದರಲ್ಲೂ ಅಂಕಗಳನ್ನು ಗಳಿಸುವುದು ಒಂದು ಮುಖ್ಯ ಉದ್ದೇಶವಾಗಿದ್ದರೂ ಸಹ ಉಳಿದಂತೆ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ, ಧೈರ್ಯ, ಜ್ಞಾಪಕ ಶಕ್ತಿ, ಕಲಿಕೆಯ ನೈಪುಣ್ಯತೆ, ವಿಷಯಗಳ ಮನನ ಮಾಡುವುದು ಸೇರಿದಂತೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವಂತಹ ಅನೇಕ ವ್ಯಕ್ತಿತ್ವ ವಿಕಸನದಂತಹ ವಿದ್ಯಾರ್ಥಿ ಪರವಾಗಿರುವ ಸೂಕ್ಷ್ಮ ಅಂಶಗಳ ಸಮೀಕರಣ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳನ್ನು ಹೊರತರಲು ಮುಂದಿನ ಜೀವನದ ಸರ್ವತೋಮುಖ ಬೆಳಗಣಿಗೆಗೆ ಪ್ರೇರಣೆ ಹೊಂದಿದ್ದು ಅವರುಗಳು ಪೂರಕವಾಗಿರುತ್ತದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಈ ರೀತಿಯ ಅನುಭವ ಮತ್ತು ಅನುಕೂಲತೆ ನೀಡುವಂತ ಪರೀಕ್ಷೆಗಳು ಮತ್ತು ಅಂತಹ ಪರೀಕ್ಷೆಗಳನ್ನು ಉತ್ತೀರ್ಣ ಹೊಂದಲು ಈ ಹಿಂದಿನಿಂದ ನಿಗಧಿ ಪಡಿಸಿರುವಂತೆ ಶೇಕಡಾ 35 ಅಂಕಗಳು ಸಮಂಜಸವಾಗಿದ್ದು, ದೀರ್ಘಕಾಲದಿಂದ ಸಾಭೀತಾದ ಮಾನದಂಡವಾಗಿರುತ್ತದೆ. ಇಂತಹ 33 ಅಂಕಗಳಿಗೆ ಕಡಿತಗೊಳಿಸುವಂತಹ ನಿರ್ಧಾರವು ಯಾವ ಮಾನದಂಡವನ್ನು ಎಕಾಏಕಿ ಕೋನದಿಂದಲೂ ಸಹ ಸಮಂಜಸವಾದುದಲ್ಲ ಎಂಬುದಾಗಿ ವಿರೋಧ ವ್ಯಕ್ತ ಪಡಿಸಿದ್ದಾರೆ.
ಮುಂದುವರೆದು ಈ ರೀತಿ ನಿರ್ಧಾರಗಳು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಮನೋಭಾವಕ್ಕೆ ಪೆಟ್ಟು ಬೀಳುವುದಲ್ಲದೇ ಮಾನಸಿಕವಾಗಿ ಧೃಡತೆಯ ಕೊರತೆಯುಂಟಾಗುತ್ತದೆ ಮತ್ತು ಮುಂದಿನ ದಿನಮಾನಗಳಲ್ಲಿ ನಿರ್ಧಿಷ್ಟ ಬ್ಯಾಚಿನ ಅಭ್ಯರ್ಥಿಗಳ ಶೇಕಡಾ 33 ರ ಬ್ಯಾಚಿಗೆ ಸೇರಿವರು ಎಂಬಂತೆ ಇತರೆ ಬ್ಯಾಚಿನ ಅಭ್ಯರ್ಥಿಗಳೊಂದಿಗೆ ಗೇಲಿ ಮಾಡುವಂತಹ ಪ್ರಸಂಗ ಉಂಟಾಗುವ ಸಾಧ್ಯತೆ ಇದ್ದು ಅಂತಹ ಬ್ಯಾಚಿನ ಅಭ್ಯರ್ಥಿಗಳಿಗೆ ಕೀಳುರುಮೆಯ ಅನುಭವ ಉಂಟಾಗುವುದಕ್ಕೆ ಎಡೆ ಮಾಡಿದಂತಾಗುತ್ತದೆ ಎಂದಿದ್ದಾರೆ.
ಮುಂದುವರೆದು ಇದು ಇಂದಿನ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಹಾಗೂ ಶಿಕ್ಷಕರು ಕಲಿಸುವ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ. ಇದು ಸರಿಯಾದ ಕ್ರಮವಲ್ಲ ಎಂಬುದು ನನ್ನ ಭಾವನೆ. ಇದನ್ನು ಕೈಬಿಟ್ಟು ಈ ಮುಂಚೆ ಇದ್ದ ಹಾಗೆ ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 35 ಅಂಕಗಳನ್ನು ತೆಗೆದುಕೊಂಡ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕು ಎಂದು ಹೇಳಿದ್ದಾರೆ.
ಇದಕ್ಕಿಂತ ಮೊದಲು ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬಿ ವಿದ್ಯಾರ್ಥಿಗಳ ವಿದ್ಯಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಎಲ್ಲಾ ಶಾಲಾ ಹಾಗೂ ಕಾಲೇಜುಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಅನುಕೂಲ ಮಾಡಿಕೊಡುವತ್ತ ಗಮನ ಹರಿಸಬೇಕು. ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸುವುದು. ಅವರು ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುವುದು ಸೇರಿದಂತೆ ಇನ್ನು ಅನೇಕ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಧನಾತ್ಮಕ ಬದಲಾವಣೆಗಳನ್ನು ತರುವುದರ ಮೂಲಕ ಶಾಲಾ ಶಿಕ್ಷಣದಲ್ಲೂ ಅಮೂಲಾಗ್ರ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ.
ಈ ಹಿಂದೆ ನಾನು ಶಿಕ್ಷಣ ಸಚಿವನಾಗಿ ಕಾರ್ಯ ನಿರ್ವಹಿಸಿದ್ದು, ಸದರಿ ಕಾಲಾವಧಿಯಲ್ಲಿ ಅಗತ್ಯವಿರುವ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರನ್ನು ನೇಮಕಾತಿ ಮಾಡಿದ್ದೆನು. ಒಟ್ಟಿನಲ್ಲಿ ನಾನು ಈ ಮೂಲಕ ತಮಗೆ ತಿಳಿಸುವುದೇನೆಂದರೆ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲೂ ಕನಿಷ್ಠ 33 ಅಂಕಗಳನ್ನು ತೆಗೆದುಕೊಂಡರೆ ಉತ್ತೀರ್ಣ ಮಾಡುತ್ತೇವೆ ಎಂಬುದನ್ನು ಕೈಬಿಟ್ಟು, ಮುಂಚೆ ಇದ್ದ ಪದ್ಧತಿಯನ್ನೇ ಮುಂದುವರೆಸಬೇಕೆಂದು ಈ ಮೂಲಕ ಕೋರಿದ್ದಾರೆ.










