ರಾಯಚೂರು : ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಯುವಕನನ್ನು ಆತನ ತಾಯಿಯ ಎದುರಲ್ಲಿ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ನಡೆದಿದೆ.
ಬುಳ್ಳಾಪುರದ ಪ್ರಾಣೇಶ್ (23) ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. ದಿನ್ನಿ ಗ್ರಾಮದ ಪ್ರಸಾದ್, ಮಲ್ಲೇಶ್, ಮಲ್ಲಿಕಾರ್ಜುನ್, ಅಮರೇಶ್ ಎಂಬುವವರಿಂದ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಪ್ರಸಾದ್ ಹೆಂಡತಿ ಮತ್ತು ಪ್ರಾಣೇಶ್ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗುತ್ತಿದೆ. ಬುಳ್ಳಾದಲ್ಲಿ ಜಾಗದ ವಿಷಯವಾಗಿ ನ್ಯಾಯ ಪಂಚಾಯಿತಿ ನಡೆಯುತ್ತಿದ್ದ ವೇಳೆ ತಾಯಿ ಎದುರಲ್ಲೇ ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ.
ಕಳೆದ ಮೂರು ತಿಂಗಳಿನಿಂದ ಪ್ರಾಣೇಶ್ ಗಾಗಿ ಹುಡುಕಾಟ ನಡೆಸುತ್ತಿದ್ದರು. ಪ್ರಾಣೇಶ್ ಇರುವುದನ್ನು ಖಚಿತಪಡಿಸಿಕೊಂಡು ಹಿಂದಿನಿಂದ ಬಂದ ಪ್ರಸಾದ್ ತಲೆಗೆ ಕೊಡಲಿಯಿಂದ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಪ್ರಾಣೇಶ್ ನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಆರೋಪಿಗಳು ತಲೆ ಮರೆಸಿಕೊಂಡಿದ್ದು, ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








