ಚಾಮರಾಜನಗರ : ಹಾಡಹಗಲೇ ಹುಲಿಗಳು ಕಾದಾಡಿ ಅದರಲ್ಲಿ ಒಂದು ವ್ಯಾಘ್ರ ತೀವ್ರವಾಗಿ ಗಾಯಗೊಂಡು ಜಮೀನಿನಲ್ಲಿ ಮಲಗಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ. ಕುಂದಕೆರೆ ಗ್ರಾಮದ ಮಹಾದೇವ್ ಎಂಬುವವರ ಜಮೀನಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಾದಾಟದಲ್ಲಿ ಗಾಯಗೊಂಡ ಹುಲಿ ಕಂಡು ಜಮೀನಲ್ಲಿದ್ದ ರೈತರು ಭಯಗೊಂಡು ಕಾಲ್ಕಿತ್ತಿದ್ದಾರೆ. ಬಳಿಕ, ಅರಣ್ಯ ಇಲಾಖೆಗೆ ಈ ವಿಚಾರ ಮುಟ್ಟಿಸಿದ್ದಾರೆ.
ಹುಲಿಗಳು ತಮ್ಮ ಸರಹದ್ದನ್ನು ನಿರ್ಮಾಣ ಮಾಡಿಕೊಳ್ಳಲಿದ್ದು, ಸರಹದ್ದಿಗಾಗಿ ಎರಡು ಗಂಡು ಹುಲಿಗಳು ಕಾದಾಡುತ್ತವೆ. ಹೀಗೆ ಕಾದಾಡುವಾಗ ಕೆಲವೊಮ್ಮೆ ಪ್ರಾಣವನ್ನೇ ಕಳೆದುಕೊಳ್ಳಲಿವೆ. ಬಲಿಷ್ಠ ಹುಲಿ ಸರಹದ್ದನ್ನು ಪಡೆದರೆ, ಸೋತ ಹುಲಿಯು ಅನ್ಯ ಮಾರ್ಗವಿಲ್ಲದೇ ಬೇರೆ ಸರಹದ್ದನ್ನು ನೋಡಿಕೊಳ್ಳಬೇಕಾಗುತ್ತದೆ.
ಈ ಕುರಿತು ಬಂಡೀಪುರ ಎಸಿಎಫ್ ನವೀನ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಹುಲಿಗಳ ಕಾದಾಟದಲ್ಲಿ ಒಂದು ಹುಲಿ ಗಾಯಗೊಂಡು ಅಸ್ವಸ್ಥವಾಗಿದೆ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ಕೊಟ್ಟಿದ್ದಾರೆ. ಇದೀಗ ಗಾಯಗೊಂಡ ಹುಲಿ ಮೇಲೆ ನಿಗಾ ಇಡಲಾಗಿದೆ. ಹುಲಿ ಸೆರೆ ಹಿಡಿದು ಚಿಕಿತ್ಸೆ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ