ಚಿಕ್ಕೋಡಿ: ನಾಪತ್ತೆಯಾಗಿದ್ದ ಮಹಿಳೆಯೊಬ್ಬಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಅಣ್ಣನೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಆಘಾತಕಾರಿ ಅಂಶ ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಅಣ್ಣ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಮೃತ ಮಹಿಳೆ ಸತ್ತೆವ್ವಾ ಎಂಬುವವರು ಕಳೆದ ಕೆಲವು ದಿನಗಳಿಂದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಇದರಿಂದ ಸಂಶಯಗೊಂಡ ಆಕೆಯ ಪ್ರಿಯಕರ ಕೃಷ್ಣಾ ಎಂಬಾತ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ದೂರಿನ ಆಧಾರದ ಮೇಲೆ ಸಿಪಿಐ ಜಾವೇದ್ ಮುಶಾಪುರಿ ಅವರು ತನಿಖೆ ಆರಂಭಿಸಿದ್ದರು.
ವಿಚಾರಣೆ ವೇಳೆ ತಪ್ಪೊಪ್ಪಿಗೆ:
ತನಿಖೆಯ ಭಾಗವಾಗಿ ಪೊಲೀಸರು ಮಹಿಳೆಯ ಅಣ್ಣ ಶಾನೂರನನ್ನು ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ಸತ್ತೆವ್ವಾಳನ್ನು ತಾನೇ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಈ ಕೊಲೆ ಕೃತ್ಯಕ್ಕೆ ಇತರರು ಸಾಥ್ ನೀಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಮೂವರು ಆರೋಪಿಗಳ ಬಂಧನ:
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಾನೂರ, ಆತನಿಗೆ ಸಹಕರಿಸಿದ ಪ್ರಕಾಶ್ ಮತ್ತು ಕಲ್ಲಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕೊಲೆಗೆ ನಿಖರ ಕಾರಣವೇನು ಮತ್ತು ಕೃತ್ಯ ಎಸಗಿದ ರೀತಿ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.








