ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ಹೃದಯ ಭಾಗದಲ್ಲೇ ಆ ರಸ್ತೆ ಇದೆ. ಖಾಸಗಿ ಬಸ್ ನಿಲ್ದಾಣದಿಂದ ಕೂಗಳತೆ ದೂರ ಬೇರೆ. ಹೀಗಿದ್ದರೂ ರಸ್ತೆ ಮಾತ್ರ ಡಾಂಬಾರ್ ಕಂಡಿಲ್ಲ. ಚರಂಡಿಗಳು ನಿರ್ಮಾಣವಾಗಿಲ್ಲ. ಹಾಗಾದರೆ ನಗರಸಭೆಯವರಿಗೆ ಇದು ಕಂಡಿಲ್ಲವ ಎಂಬುದು ರಸ್ತೆಯಲ್ಲಿನ ನಿವಾಸಿಗಳ ಪ್ರಶ್ನೆ.
ಹೌದು ಸಾಗರ ಪಟ್ಟಣದ ಹೃದಯ ಭಾಗದಲ್ಲಿ ಡಾಂಬರ್ ಕಾಣದ ರಸ್ತೆಯೊಂದು ಜೋಸೆಫ್ ನಗರದಲ್ಲಿದೆ. ಅಲ್ಲಿನ ಮನೆಗಳು ನಿರ್ಮಾಣಕ್ಕೆ ಮೊದಲೋ ಅಥವಾ ಮನೆಗಳು ನಿರ್ಮಾಣಗೊಂಡ ಕೆಲ ವರ್ಷಗಳ ನಂತರ ರಸ್ತೆಗೆ ಡಾಂಬಾರೀಕರಣ ಮಾಡಿರಬೇಕು. ಅದರ ಹೊರತಾಗಿ ಈವರೆಗೆ ಆಗಿಲ್ಲ. ಜನರು ಓಡಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆ ಹಾಳಾಗಿದೆ.

ಸಾಗರದ ಬಿಹೆಚ್ ರಸ್ತೆಯ ಆಭರಣ ಜ್ಯೂವೆಲ್ಲರಿ ಎದುರು, ಏಥರ್ ಎಲೆಕ್ಟ್ರಿಕ್ ಬೈಕ್ ಶೋ ರೂಮ್ ಪಕ್ಕದಲ್ಲೇ ಇರೋ ಈ ರಸ್ತೆ ಮಾತ್ರ ಹಲವು ವರ್ಷಗಳೇ ಕಳೆದರೂ ಟಾರ್ ಕಂಡಿಲ್ಲ. ಡಾಂಬಾರೀಕರಣ ಕಾಣದೇ ಜಲ್ಲಿಕಲ್ಲುಗಳ ಎದ್ದು ಓಡಾಟಕ್ಕೂ ಕಷ್ಟವಾಗಿದೆ. ಚರಂಡಿಗಳು ತುಂಬಿ ಹೋಗಿದ್ದರೇ, ಅಲ್ಲಲ್ಲಿ ನೀರು ಹರಿಯದಂತೆ ಚರಂಡಿಗಳೇ ಬಂದ್ ಆಗಿವೆ. ಎಷ್ಟೋ ವರ್ಷಗಳಿಂದ ಚರಂಡಿಯನ್ನು ಕ್ಲೀನ್ ಮಾಡದೇ ನೀರು ನಿಂತು ಸಾಂಕ್ರಾಮಿಕ ರೋಗಕ್ಕೂ ಕಾರಣವಾಗಿದೆ.
ಸಾಗರ ಪಟ್ಟಣದ ಜೋಸೆಫ್ ನಗರದ 1ನೇ ಕ್ರಾಸ್ ರಸ್ತೆ ಜನರ ಗೋಳು ಕೇಳುವವರೇ ಇಲ್ವ.? ರಾತ್ರಿ ಆದರೆ ಸಾಕು ಲೈಟ್ ಕಂಬಗಳಲ್ಲಿ ಲೈಟ್ ಇರದ ಕಾರಣ ಅನಧಿಕೃತ ಚಟುವಟಿಕೆಯ ತಾಣವಾಗಿಯೂ ಮಾರ್ಪಟ್ಟಿದೆ ಎಂಬುದು ರಸ್ತೆಯ ನಿವಾಸಿಗಳ ಆಕ್ರೋಶ.

ರಸ್ತೆಯಲ್ಲೇ ವಿದ್ಯುತ್ ಪರಿಕರ ಹಾಕಿ ಕೈ ಬಿಟ್ಟ ಮೆಸ್ಕಾಂ, ಓಡಾಟಕ್ಕೂ ಸಮಸ್ಯೆ
ಸಾಗರದ ಜೋಸೆಫ್ ನಗರದ ಏಥೆರ್ ಎಲೆಕ್ಟ್ರಿಕ್ ಬೈಕ್ ಶೋ ರೂಂ ಪಕ್ಕದ 1ನೇ ಕ್ರಾಸ್ ರಸ್ತೆಯಲ್ಲಿ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ವಯರ್, ಕಂಬ ಹಾಕಿದ್ದಾರೆ. ಹೀಗಾಗಿ ಈ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೂ ಅಡಚಣೆ ಉಂಟಾಗಿದೆ. ಕೂಡಲೇ ಮೆಸ್ಕಾಂ ಸಿಬ್ಬಂದಿ ಇದನ್ನು ಗಮನಿಸಿ, ತೆರವು ಗೊಳಿಸುವಂತೆ ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಮಾರಿ ಜಾತ್ರೆಯ ಈಗಲಾದರೂ ಡಾಂಬಾರೀಕರಣ ಆಗುತ್ತಾ.?
ಸಾಗರದಲ್ಲಿ ಮಾರಿ ಜಾತ್ರೆಯ ತಯಾರಿ ಜೋರಾಗಿದೆ. ಜೊತೆಗೆ ಪ್ರಮುಖ ರಸ್ತೆಗಳ ಡಾಂಬಾರೀಕರಣಕ್ಕೂ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದ್ದಾರೆ. ಹೀಗಾಗಿ ಈಗಾಗಲೇ ಹಲವಾರು ರಸ್ತೆಗಳನ್ನು ಡಾಂಬಾರೀಕರಣ ಮಾಡಲಾಗಿದೆ, ಮಾಡಲಾಗುತ್ತಿದೆ.
ಇದೇ ಮಾರಿಕಾಂಬ ಜಾತ್ರೆಯ ಸುಸಂದರ್ಭದಲ್ಲಿ ಆದರೂ ಸಾಗರದ ಜೋಸೆಫ್ ನಗರದ 1ನೇ ಕ್ರಾಸಿನ ಜಸ್ಟ್ 200 ರಿಂದ 300 ಮೀಟರ್ ಇರುವ, ಡಾಂಬಾರ್ ಕಂಡು ಎಷ್ಟೋ ವರ್ಷಗಳೇ ಕಳೆದಿರುವಂತ ರಸ್ತೆಗೂ ಡಾಂಬಾರೀಕರಣ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ ಅಲ್ಲಿನ ನಿವಾಸಿಗಳು ಇದ್ದಾರೆ. ಕೆಲ ದಿನಗಳ ಹಿಂದೆ ಜೋಸೆಫ್ ನಗರದ 2ನೇ ಕ್ರಾಸ್ ರಸ್ತೆ ಡಾಂಬಾರೀಕರಣಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದ್ದರು. ಇದೇ ಬಡಾವಣೆಯ 1ನೇ ಕ್ರಾಸ್ ರಸ್ತೆಗೂ ಡಾಂಬಾರೀಕರಣ ಭಾಗ್ಯ ಕಲ್ಪಿಸಲಿ. ಆ ಮೂಲಕ ರಸ್ತೆಯಲ್ಲಿ ಇರುವ ನಿವಾಸಿಗಳಿಗೆ, ಆ ರಸ್ತೆಯಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಸಾಗುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು








