ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಸ್ಯಾಹಾರಿ ತಿನ್ನುವುದುಕ್ಕೆ ಜನರು ಇಷ್ಟ ಪಡುತ್ತಾರೆ. ಹೊರಗೆ ಹೋದ್ರೆ ಸಸ್ಯಾಹಾರಿ ಹೋಟೆಲ್ ಹುಡುಕುವ ಮಂದಿ ಹೆಚ್ಚಿರುತ್ತದೆ. ಅಂತಹದರಲ್ಲಿ ಇಲ್ಲೊಂದು ಊರಿನಲ್ಲಿ ವಿಚಿತ್ರ ಘಟನೆ ನಡೆದಿದೆ.
ಇಲೊಬ್ಬ ವ್ಯಕ್ತಿಗೆ ಆತ ಸಸ್ಯಾಹಾರಿ ಎಂಬ ಒಂದೇ ಕಾರಣಕ್ಕೆ ಮೆಡಿಕ್ಲೈಮ್ (ಆರೋಗ್ಯ ವಿಮೆ) ಅನ್ನು ತಿರಸ್ಕರಿಸಿರುವ ಘಟನೆ ನಡೆದಿದೆ. ”ವಿಮೆದಾರನು ಸಸ್ಯಾಹಾರಿಯಾದ ಕಾರಣದಿಂದಲೇ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಹಾಗಾಗಿ ಆತನ ಮೆಡಿಕ್ಲೈಮ್ ಅನ್ನು ಒಪ್ಪಲು ಸಾಧ್ಯವಿಲ್ಲ,” ಎಂದು ವಿಮೆ ಕಂಪನಿಯೊಂದು ಮೆಡಿಕ್ಲೈಮ್ ಅನ್ನು ತಿರಸ್ಕರಿಸಿತ್ತು. ಆದರೆ, ಮಧ್ಯ ಪ್ರವೇಶಿಸಿದ ಜಿಲ್ಲಾ ಗ್ರಾಹಕ ಆಯೋಗವು ಕಂಪನಿಯ ವಾದವನ್ನು ತಳ್ಳಿಹಾಕಿದೆ.
ಸಂತ್ರಸ್ತ ವ್ಯಕ್ತಿಗೆ ಬಡ್ಡಿ ಸಮೇತ ವಿಮೆ ಮೊತ್ತವನ್ನು ಪಾವತಿಸುವಂತೆ ಆದೇಶಿಸಿದೆ. ”ಸಸ್ಯಾಹಾರಿಯಾಗಿರುವುದು ಅಪರಾಧವಲ್ಲ ಮತ್ತು ಕಂಪನಿಯು ಅವರ ಮೆಡಿಕ್ಲೈಮ್ ಕ್ಲೈಮ್ ಅನ್ನು ತಿರಸ್ಕರಿಸಲು ತಪ್ಪು ಕಾರಣ ನೀಡಿದೆ,” ಎಂದು ಆಯೋಗ ಹೇಳಿದೆ.
ಮೀಟ್ ಠಕ್ಕರ್ ಎಂಬ ವ್ಯಕ್ತಿ 2015ರ ಅಕ್ಟೋಬರ್ನಲ್ಲಿ ಒಂದು ವಾರ ಚಿಕಿತ್ಸೆ ಪಡೆದಿದ್ದರು. ಅವರು ತಲೆಸುತ್ತು, ವಾಕರಿಕೆ, ದೇಹದ ಕೆಲ ಭಾಗದಲ್ಲಿ ದುರ್ಬಲತೆಯನ್ನು ಹೊಂದಿದ್ದರು. ಅವರು ತಾತ್ಕಾಲಿಕ ರಕ್ತಕೊರತೆಯ ಸಮಸ್ಯೆಯನ್ನೂ ಹೊಂದಿದ್ದರು. ಅವರ ಹೋಮೋಸಿಸ್ಟೈನ್ ಮಟ್ಟವು 23.52ಕ್ಕೆ ಏರಿಕೆಯಾಗಿತ್ತು. ಇದು ಸಾಮಾನ್ಯವಾಗಿ 5 ಮತ್ತು 15ರ ನಡುವೆ ಇರುತ್ತದೆ. ಅವರ ಚಿಕಿತ್ಸೆಗೆ ಮೆಡಿಕಲ್ ಬಿಲ್ ಒಂದು ಲಕ್ಷ ರೂಪಾಯಿಯವರೆಗೂ ದಾಟಿತ್ತು. ಆದರೆ ಆರೋಗ್ಯ ವಿಮಾ ಕಂಪನಿ ನ್ಯೂ ಇಂಡಿಯಾ ಅಶ್ಯೂರೆಸ್ಸ್ ಲಿಮಿಟೆಡ್ ಮೆಡಿಕ್ಲೈಮ್ ಅನ್ನು ತಿರಸ್ಕರಿಸಿತು.