ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ಭಾನುವಾರ ತನ್ನ ಮನೆಯ ಟೆರೇಸ್ ಮೇಲೆ ಕೋತಿಗಳ ಹಿಂಡು ದಾಳಿ ಮಾಡಿದ್ದರಿಂದ 54 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾವನ್ನಪ್ಪಿರುವ ವ್ಯಕ್ತಿಯನ್ನು ಬೆಂಗಾಲಿ ಘಾಟ್ನ ಮಾರು ಗಲಿ ನಿವಾಸಿ ಶಿವ ಲಾಲ್ ಚತುರ್ವೇದಿ ಎಂದು ಗುರುತಿಸಲಾಗಿದೆ. ಶಿವ ಲಾಲ್ ಅವರು ತಮ್ಮ ಮನೆಯ ಮೂರನೇ ಮಹಡಿಯ ಟೆರೇಸ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕೋತಿಗಳ ಗುಂಪು ಅವರ ಮೇಲೆ ದಾಳಿ ಮಾಡಿತು, ಅವುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆತ ಮೂರನೇ ಮಹಡಿಯಿಂದ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಶಿವಲಾಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಮಥುರಾದಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು, ಪ್ರತಿದಿನ ಮಂಗಗಳು ಜನರ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಗಗಳ ಕಾಟಕ್ಕೆ ಈವರೆಗೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದರೂ ಮಂಗಗಳ ಹಾವಳಿ ತಡೆಯಲು ಸ್ಥಳೀಯ ಅಧಿಕಾರಿಗಳು ವಿಫಲವಾಗಿದ್ದಾರೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.