ಕೊಳ್ಳೇಗಾಲ : ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣದಲ್ಲಿ, ವನ್ಯಜೀವಿಗಳ ಸಾವಿಗೀಡಾದಾಗ ಅಧಿಕಾರಿಗಳ ಕರ್ತವ್ಯಲೋಪ, ನಿರ್ಲಕ್ಷ್ಯ ಸಾಬೀತಾದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿಂದು ಆಯೋಜಿಸಿದ್ದ ಅರಣ್ಯ ಸಮಸ್ಯೆಗಳ ಕುರಿತಂತೆ ರೈತರು ಮತ್ತು ಸಾರ್ವಜನಿಕರೊಂದಿಗೆ ಸಂವಾದಕ್ಕೆ ತೆರಳುವ ಹಾದಿಯಲ್ಲಿ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವನ್ಯಜೀವಿ ಮಾನವ ಸಂಘರ್ಷ ನಿಯಂತ್ರಿಸಲು ರಾಜ್ಯಮಟ್ಟದ ನಿರ್ವಹಣಾ ಕಾರ್ಯಪಡೆ ರಚಿಸಲಾಗುತ್ತಿದ್ದು, ಈ ಕಾರ್ಯಪಡೆ ವನ್ಯಜೀವಿಗಳು ನಾಡಿಗೆ ಬರುತ್ತಿರುವ ಬಗ್ಗೆ ಸಮಗ್ರ ಅಧ್ಯಯನ ನಡೆಸಲಿದೆ ಜೊತೆಗೆ ಅಧಿಕಾರಿ, ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆಯೂ ಪರಾಮರ್ಶಿಸಲಿದೆ ಎಂದರು.
ಕೆಲವು ಅಧಿಕಾರಿಗಳು ತಮ್ಮ ಕುಟುಂಬದವರೊಂದಿಗೆ ಕಾಡಿನೊಳಗೆ ಮೋಜು ಮಸ್ತಿ ಮಾಡುತ್ತಿದ್ದಾರೆ ಈ ಬಗ್ಗೆ ಕ್ರಮ ಆಗುತ್ತದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿಯಮ ಎಲ್ಲರಿಗೂ ಒಂದೇ. ಯಾವುದೇ ಅಧಿಕಾರಿ ನಿಯಮ ಉಲ್ಲಂಘಿಸಿದ್ದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಆಗಲಿದೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.








