ಶಿವಮೊಗ್ಗ: ಜಿಲ್ಲೆಯ ತಾಲ್ಲೂಕಿನ ಶೇಡ್ತಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಶಾಲೆಯ ಸಹ ಶಿಕ್ಷಕರಾದ ಮೂರ್ತಿ ಬಿ., ಪ್ರಮೋದ್ ಸಣ್ಣಕ್ಕಿ ಹಾಗೂ ಮುಖ್ಯೋಪಾಧ್ಯಾಯ ರಮೇಶ್ ನಾರಾಯಣ್ ಅವರು ಸುಶ್ರುತ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ಘಟನೆಯ ವಿವರ:
ದಿನಾಂಕ 12-03-2026ರಂದು ಬೆಳಿಗ್ಗೆ ಸುಮಾರು 11 ಗಂಟೆಯ ಸಮಯದಲ್ಲಿ ಶಾಲೆಯಲ್ಲಿ ನಡೆದಿದೆ ಎನ್ನಲಾದ ಕೆಲವು ಸಣ್ಣಪುಟ್ಟ ತಪ್ಪುಗಳಿಗಾಗಿ ವಿದ್ಯಾರ್ಥಿ ಸುಶ್ರುತನನ್ನು ಹೊಣೆಗಾರನನ್ನಾಗಿಸಿ, ಈ ಮೂವರು ಶಿಕ್ಷಕರು ಸೇರಿ ಆತನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಶಿಕ್ಷಕರ ಈ ಅಮಾನವೀಯ ಕೃತ್ಯದಿಂದಾಗಿ ಬಾಲಕನ ಮೈಮೇಲೆ ಬಾಸುಂಡೆಗಳು ಎದ್ದಿದ್ದು, ಕೈ ಬೆರಳುಗಳು ಜಜ್ಜಿ ರಕ್ತ ಬಂದಿದೆ.
ಆತಂಕದಲ್ಲಿ ಪೋಷಕರು:
ಹಲ್ಲೆಗೊಳಗಾದ ಬಾಲಕ ತೀವ್ರ ಆಘಾತಕ್ಕೊಳಗಾಗಿದ್ದು, ಆತನನ್ನು ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದೊಯ್ಯಲಾಗಿತ್ತು. ಬಾಲಕನಿಗೆ ತೀವ್ರವಾಗಿ ಪೆಟ್ಟಾಗಿರುವ ಕಾರಣ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗನ ಮೈಮೇಲಿನ ಗಾಯಗಳನ್ನು ಕಂಡು ಪೋಷಕರಾದ ಕೃಷ್ಣಮೂರ್ತಿ ಮತ್ತು ಶೈಲಜಾ ಅವರು ಕಣ್ಣೀರು ಹಾಕುತ್ತಿದ್ದು, ಅಕ್ಷರ ಕಲಿಸಬೇಕಾದ ಶಿಕ್ಷಕರೇ ಇಂತಹ ನೀಚ ಕೃತ್ಯ ಎಸಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಕ್ಕಾಗಿ ಮನವಿ:
ಶಾಲೆಯ ಆವರಣದಲ್ಲಿ ವಿದ್ಯಾರ್ಥಿಯ ಮೇಲೆ ನಡೆದ ಈ ದೈಹಿಕ ದೌರ್ಜನ್ಯವು ಶಿಕ್ಷಣ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಹಲ್ಲೆ ನಡೆಸಿದ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಮಗನಿಗೆ ನ್ಯಾಯ ಒದಗಿಸಿಕೊಡಬೇಕೆಂದು ಪೋಷಕರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…








