ಬೆಳಗಾವಿ: ಇಲ್ಲಿನ ಅಜಂ ನಗರದ ವಿದ್ಯಾರ್ಥಿನಿಲಯದಲ್ಲಿ ಯುವತಿಯೊಬ್ಬಳು ತನ್ನ ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ. ಮೃತ ಯುವತಿಯನ್ನು ಹುಕ್ಕೇರಿ ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ್ ನಾಯಕ (21) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಕಾವೇರಿ ಬೆಳಗಾವಿಯ ಅಜಂ ನಗರದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಾಸವಿದ್ದು, ಬಿಎಸ್‌ಸಿ ಅಂತಿಮ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿದ್ದಳು. ಸೋಮವಾರ ಅವಳ ಜನ್ಮದಿನವಾಗಿತ್ತು. ಸಂಭ್ರಮಿಸಬೇಕಾದ ದಿನವೇ ಯುವತಿ ಹಾಸ್ಟೆಲ್ ಕೋಣೆಯಲ್ಲಿ ನೇಣಿಗೆ ಶರಣಾಗುವ ಮೂಲಕ ಕುಟುಂಬದವರಿಗೆ ಆಘಾತ ನೀಡಿದ್ದಾಳೆ.
ಇತ್ತೀಚೆಗಷ್ಟೇ ಆಗಿದ್ದ ಮದುವೆ ನಿಶ್ಚಯ:
ಮೃತ ಕಾವೇರಿಗೆ ಇತ್ತೀಚೆಗಷ್ಟೇ ಪೊಲೀಸ್ ಪೇದೆಯೊಬ್ಬರ ಜೊತೆ ಮದುವೆ ನಿಶ್ಚಯವಾಗಿತ್ತು. ಕುಟುಂಬಸ್ಥರು ಸಮ್ಮತಿಸಿ ನಿಶ್ಚಿತಾರ್ಥ (Engagement) ಕೂಡ ನೆರವೇರಿಸಿದ್ದರು. ಮದುವೆ ಸಿದ್ಧತೆಗಳ ನಡುವೆಯೇ ಯುವತಿ ಈ ನಿರ್ಧಾರ ಕೈಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ಥಳಕ್ಕೆ ಪೊಲೀಸರ ಭೇಟಿ:
ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಎಪಿಎಂಸಿ ಠಾಣೆಯ ಸಿಪಿಐ ಉಸ್ಮಾನ್ ಆವಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹುಟ್ಟಿದ ಹಬ್ಬದಂದೇ ಮಗಳ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Papaya Eating Benefits: ಆರೋಗ್ಯದ ಖಜಾನೆ ಈ ಪಪ್ಪಾಯಿ: ಖಾಲಿ ಹೊಟ್ಟೆಯಲ್ಲಿ ತಿಂದರೆ ಸಿಗುತ್ತೆ ಐದು ಲಾಭ!








