ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಒಟಿಪಿ (OTP) ವಂಚನೆ, ನಕಲಿ ಹೂಡಿಕೆ ಯೋಜನೆಗಳು, ಡಿಜಿಟಲ್ ಅರೆಸ್ಟ್ನಂತಹ ಹೊಸ ತಂತ್ರಗಳ ಮೂಲಕ ಸೈಬರ್ ಅಪರಾಧಿಗಳು ಜನರನ್ನು ವಂಚಿಸುತ್ತಿದ್ದಾರೆ. ಇವರ ಜಾಲಕ್ಕೆ ಬಿದ್ದು ಅನೇಕರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಕಷ್ಟಪಟ್ಟು ಸಂಪಾದಿಸಿದ ಹಣವನ್ನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ.
ಆದರೆ, ಹೀಗೆ ಹಣ ಕಳೆದುಕೊಂಡಾಗ ಯಾರಿಗೆ ದೂರು ನೀಡಬೇಕು, ಹಣವನ್ನು ಹೇಗೆ ವಾಪಸ್ ಪಡೆಯಬೇಕು ಎಂಬುದು ಹಲವರಿಗೆ ತಿಳಿಯುವುದಿಲ್ಲ. ಇದಕ್ಕಾಗಿ ಬ್ಯಾಂಕ್ಗಳು ಮತ್ತು ಪೊಲೀಸ್ ಠಾಣೆಗಳ ಸುತ್ತ ಅಲೆಯುತ್ತಿರುತ್ತಾರೆ. ಆದರೆ ಇನ್ನು ಮುಂದೆ ನೀವು ಎಲ್ಲಿಗೂ ಅಲೆಯುವ ಅಗತ್ಯವಿಲ್ಲ! ಮನೆಯಲ್ಲೇ ಕುಳಿತು ಸೈಬರ್ ವಂಚನೆ ಕುರಿತು ದೂರು ನೀಡುವುದರ ಜೊತೆಗೆ ನಿಮ್ಮ ಹಣವನ್ನು ಮರುಪಾವತಿ ಪಡೆಯಬಹುದು. ಇದಕ್ಕಾಗಿ ಕೇಂದ್ರ ಗೃಹ ಸಚಿವಾಲಯವು ಮೊಬೈಲ್ ರಿಸ್ಟೋರೇಶನ್ ಮಾಡ್ಯೂಲ್ (MRM) ಪೋರ್ಟಲ್ ಅನ್ನು ಪ್ರಾರಂಭಿಸಿದೆ.
ಏನಿದು MRM ಪೋರ್ಟಲ್?
ಭಾರತೀಯ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C), ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ನ ಭಾಗವಾಗಿ ಈ ‘ಮೊಬೈಲ್ ರಿಸ್ಟೋರೇಶನ್ ಮಾಡ್ಯೂಲ್’ (MRM) ಅನ್ನು ಪರಿಚಯಿಸಿದೆ. ಈ ಪೋರ್ಟಲ್ ಮೂಲಕ ಸಂತ್ರಸ್ತರು ತಮ್ಮ ಮನೆಯಿಂದಲೇ ಸುಲಭವಾಗಿ ಹಣದ ಮರುಪಾವತಿಗಾಗಿ (Refund) ಅರ್ಜಿ ಸಲ್ಲಿಸಬಹುದು.
ನಿಮ್ಮ ಖಾತೆಯಿಂದ ಹಣ ಕಡಿತಗೊಂಡ ತಕ್ಷಣ ನೀವು ದೂರು ನೀಡಿದರೆ, ವಂಚಕನ ಖಾತೆಯಲ್ಲಿರುವ ಹಣವನ್ನು ಫ್ರೀಜ್ (Freeze) ಮಾಡಿ, ಅದನ್ನು ನಿಮಗೆ ಮರುಪಾವತಿ ಮಾಡಲಾಗುತ್ತದೆ. ಆದರೆ ತಕ್ಷಣ ದೂರು ನೀಡುವುದು ಇಲ್ಲಿ ಅತ್ಯಂತ ಮುಖ್ಯವಾಗಿದೆ.
ಹಣ ವಾಪಸ್ ಪಡೆಯಲು ಪ್ರಮುಖ ಷರತ್ತುಗಳು:
ಹಣ ಕಳೆದುಕೊಂಡ ತಕ್ಷಣ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿರಬೇಕು.
ವಂಚಕನ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿರಬೇಕು.
ಫ್ರೀಜ್ ಮಾಡಲಾದ ಮೊತ್ತವು ₹50,000 ಕ್ಕಿಂತ ಕಡಿಮೆ ಇದ್ದರೆ, ಯಾವುದೇ ಎಫ್ಐಆರ್ (FIR) ಅಥವಾ ನ್ಯಾಯಾಲಯದ ಆದೇಶದ ಅಗತ್ಯವಿರುವುದಿಲ್ಲ. ಕೇವಲ ಪೊಲೀಸ್ ದೂರಿನ ಆಧಾರದ ಮೇಲೆ ಹಣ ರೀಫಂಡ್ ಆಗುತ್ತದೆ.
ಒಂದು ವೇಳೆ ಮೊತ್ತ ₹50,000 ಕ್ಕಿಂತ ಹೆಚ್ಚಿದ್ದರೆ, ಎಫ್ಐಆರ್ ದಾಖಲಿಸಿ ಕೋರ್ಟ್ ಆದೇಶವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.
ಮರುಪಾವತಿ (Refund) ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು MRM ಪೋರ್ಟಲ್ ಅನ್ನು ಓಪನ್ ಮಾಡಿ.
ಅಲ್ಲಿ ಕಾಣಿಸುವ Citizen Login ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಮೊಬೈಲ್ಗೆ ಬರುವ OTP ಅನ್ನು ಎಂಟರ್ ಮಾಡಿ ಲಾಗ್-ಇನ್ ಆಗಿ.
ನಂತರ Raise Refund Request ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
ನಿಮ್ಮ 14 ಅಂಕಿಗಳ ದೂರು ಐಡಿಯನ್ನು (Complaint ID) ನಮೂದಿಸಿ.
ಈಗ ಸಿಸ್ಟಮ್ ನಿಮ್ಮ ಫ್ರೀಜ್ ಆಗಿರುವ ಮೊತ್ತವನ್ನು ಪರದೆಯ ಮೇಲೆ ತೋರಿಸುತ್ತದೆ.
ನಿಮ್ಮ ಪ್ಯಾನ್ ಕಾರ್ಡ್ನ (PAN Card) ಡಿಜಿಟಲ್ ಪ್ರತಿಯನ್ನು ಅಪ್ಲೋಡ್ ಮಾಡಿ.
ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ನಿಮ್ಮ ಬಳಿ ನ್ಯಾಯಾಲಯದ ಆದೇಶವಿದ್ದರೆ (₹50,000 ಕ್ಕಿಂತ ಹೆಚ್ಚಿನ ಮೊತ್ತಕ್ಕೆ), ಅದರ ಪ್ರತಿಯನ್ನು ಸಹ ಅಪ್ಲೋಡ್ ಮಾಡಿ.
ಕೊನೆಯದಾಗಿ ಡಿಕ್ಲರೇಶನ್ ಫಾರ್ಮ್ ಅನ್ನು ಒಪ್ಪಿಕೊಂಡು, Submit ಬಟನ್ ಕ್ಲಿಕ್ ಮಾಡಿ.
ಇದರೊಂದಿಗೆ ನಿಮ್ಮ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ ಮತ್ತು ಪರಿಶೀಲನೆಯ ನಂತರ ನಿಮ್ಮ ಹಣ ನಿಮ್ಮ ಖಾತೆಗೆ ಮರುಪಾವತಿಯಾಗುತ್ತದೆ.








