ಮೈಸೂರು: ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ಆವರಣದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬರು ಕಾಲೇಜು ಆವರಣದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೃತ ವಿದ್ಯಾರ್ಥಿಯನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದ ವೈ.ಕೆ. ಮಾದೇಶ್ ಎಂದು ಗುರುತಿಸಲಾಗಿದೆ. ಅವರು ಮೈಸೂರಿನಲ್ಲಿ ಬಿಎಸ್ಸಿ ಓದುತ್ತಿರುವ ತಮ್ಮ ಅಕ್ಕನೊಂದಿಗೆ ವಾಸವಾಗಿದ್ದು, ಮರಿಮಲ್ಲಪ್ಪ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ ಪಡೆಯುತ್ತಿದ್ದರು.
ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ತರಗತಿಯಿಂದ ಹೊರಬಂದ ಮಾದೇಶ್, ಕಾಲೇಜಿನ ಆವರಣದಲ್ಲಿ ಇದ್ದಾಗ ಏಕಾಏಕಿ ನೆಲಕ್ಕುರುಳಿದ್ದಾರೆ. ಹಿಂಬದಿಯಿಂದ ಬರುತ್ತಿದ್ದ ಸಹಪಾಠಿಗಳು ಕೂಡಲೇ ನೆರವಿಗೆ ಧಾವಿಸಿ ಅವರನ್ನು ಎಬ್ಬಿಸಿದ್ದಾರೆ. ಆದರೆ ಕೆಲ ಹೆಜ್ಜೆಗಳು ನಡೆದ ಬಳಿಕ ಅವರು ಮತ್ತೊಮ್ಮೆ ಕುಸಿದು ಬಿದ್ದಿದ್ದಾರೆ.
ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯಲಿಲ್ಲ
ಘಟನೆಯನ್ನು ಗಮನಿಸಿದ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಇದೇ ವೇಳೆ ಪೋಷಕರಿಗೂ ಮಾಹಿತಿ ನೀಡಲಾಗಿದೆ. ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ, ಮಾದೇಶ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.








