ದಾವಣಗೆರೆ: ಸಹೋದ್ಯೋಗಿಗಳ ಮಾನಸಿಕ ಹಿಂಸೆ ಹಾಗೂ ಜಾತಿ ನಿಂದನೆಗೆ ಬೇಸತ್ತು ಮುಖ್ಯ ಶಿಕ್ಷಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದ್ದು, ಈ ಸಂಬಂಧ ಐವರು ಶಿಕ್ಷಕರು ಸೇರಿದಂತೆ ಒಟ್ಟು 10 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಕೊಕ್ಕನೂರು ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಜಯಪ್ಪ (54) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಕುರಿತು ಮೃತರ ಪತ್ನಿ ಆಂಜನಮ್ಮ ಅವರು ನೀಡಿದ ದೂರಿನನ್ವಯ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
10 ಜನರ ವಿರುದ್ಧ ಎಫ್‌ಐಆರ್ ದಾಖಲು: ಮುಖ್ಯ ಶಿಕ್ಷಕ ಜಯಪ್ಪ ಅವರ ಸಾವಿಗೆ ಕಾರಣರಾದ ಆರೋಪದ ಮೇಲೆ ಸಹ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ್, ರಂಜನಿ, ಚೇತನಾ, ಮಹಾಂತೇಶ್ ಗೌಳಿ, ಅಡುಗೆ ಸಿಬ್ಬಂದಿಯಾದ ಸುಮಾ, ಚೆನ್ನಮ್ಮ, ರೂಪಾ, ವಿಜಯಮ್ಮ ಹಾಗೂ ಸಂಬಂಧಪಟ್ಟ ಸಿಆರ್‌ಪಿ (CRP) ಮತ್ತು ಬಿಆರ್‌ಪಿ (BRP) ಸೇರಿದಂತೆ ಒಟ್ಟು ಹತ್ತು ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ದೂರಿನಲ್ಲೇನಿದೆ? ಕಳೆದ 10 ತಿಂಗಳಿನಿಂದ ಕೊಕ್ಕನೂರು ಶಾಲೆಯಲ್ಲಿ ಜಯಪ್ಪ ಅವರು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. “ಶಾಲೆಗೆ ಹೋದಾಗಲೆಲ್ಲಾ ನನ್ನ ಪತಿಗೆ ಅಲ್ಲಿನ ಸಿಬ್ಬಂದಿ ನಿರಂತರವಾಗಿ ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡುತ್ತಿದ್ದರು. ನಾವು ಪರಿಶಿಷ್ಟ ಜಾತಿಗೆ (SC) ಸೇರಿದ್ದರಿಂದ ಪ್ರತಿ ಬಾರಿಯೂ ಜಾತಿ ನಿಂದನೆ ಮಾಡುತ್ತಿದ್ದರು. ಈ ಬೇಸರದ ಸಂಗತಿಯನ್ನು ನನ್ನ ಪತಿ ಹತ್ತಾರು ಬಾರಿ ನನ್ನ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದರು. ಇವರೆಲ್ಲರೂ ನೀಡಿದ ಅತಿಯಾದ ಮಾನಸಿಕ ಕಿರುಕುಳವೇ ನನ್ನ ಪತಿಯ ಆತ್ಮಹತ್ಯೆಗೆ ನೇರ ಕಾರಣ,” ಎಂದು ಜಯಪ್ಪ ಅವರ ಪತ್ನಿ ಆಂಜನಮ್ಮ ದೂರಿನಲ್ಲಿ ಕಣ್ಣೀರು ಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಲೆಬೆನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ತನಿಖೆ ಕೈಗೊಂಡಿದ್ದಾರೆ.
15,000 ಲಂಚ ಸ್ವೀಕರಿಸುತ್ತಿದ್ದ ಶಿಕ್ಷಣ ಇಲಾಖೆಯ FDA ಲೋಕಾಯುಕ್ತ ಬಲೆಗೆ!








