ಬೆಂಗಳೂರು: ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಹೊತ್ತಿರುವ ‘ಅದಿತ್ಯ ರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ನ್ಯಾಷನಲ್ ಸೇಲ್ಸ್ ಹೆಡ್ ಸಂದೀಪ್ ಗಿರಿಧರ್ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಬುಧವಾರ ಆದೇಶ ಹೊರಡಿಸಿದೆ.
ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರಿಂದ ಬರೋಬ್ಬರಿ 211 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಆರೋಪದ ಮೇಲೆ ಬಂಧನದ ಭೀತಿಯಲ್ಲಿದ್ದ ಸಂದೀಪ್ ಗಿರಿಧರ್ (ಪ್ರಕರಣದ 5ನೇ ಆರೋಪಿ) ಅವರಿಗೆ ಇದರಿಂದ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಮಾಸಿಕ ಶೇ. 5ರಷ್ಟು ಬಡ್ಡಿಯ ಆಮಿಷ!
ಸಾರ್ವಜನಿಕರಿಗೆ ಮಾಸಿಕ ಶೇ. 5 ರಷ್ಟು ಭಾರಿ ಪ್ರಮಾಣದ ಬಡ್ಡಿ ಹಾಗೂ ಉಳಿತಾಯ ಠೇವಣಿಗೆ ನಿಶ್ಚಿತ ಆದಾಯದ ಆಸೆ ತೋರಿಸಿ ಈ ಕಂಪನಿಯು ಹೂಡಿಕೆ ಮಾಡಿಸಿಕೊಂಡಿತ್ತು. ಬೆಳಗಾವಿಯಲ್ಲಿ ‘ಶಿವಂ ಅಸೋಸಿಯೇಟ್ಸ್’ ಹೂಡಿಕೆ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ, ಈ ಆದಿತ್ಯ ರಾಜ್ ಕ್ಯಾಪಿಟಲ್ ಕಂಪನಿಯ ವಹಿವಾಟಿನ ಮೇಲೂ ಅಧಿಕಾರಿಗಳು ಕಣ್ಣಿಟ್ಟಿದ್ದರು. ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಜಬೀವುಲ್ಲಾ ಕೆ. ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಬೆಳಗಾವಿ ನಗರದ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಈ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು.
ಪೊಲೀಸರು ತನಿಖೆ ಆರಂಭಿಸಿ ಕಂಪನಿಯ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಕಂಪನಿಯ ಪ್ರಮುಖರು ತಲೆಮರೆಸಿಕೊಂಡಿದ್ದರು. ಸದ್ಯ ಈ ಹಗರಣದ ಗಂಭೀರತೆಯನ್ನು ಪರಿಗಣಿಸಿ ಪ್ರಕರಣವನ್ನು ಸಿಐಡಿ (CID) ತನಿಖೆಗೆ ವಹಿಸಲಾಗಿದ್ದು, ಸಿಐಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನ್ಯಾಯಾಲಯದಲ್ಲಿ ತೀವ್ರ ವಾದ-ಪ್ರತಿವಾದ
ಆರೋಪಿ ಸಂದೀಪ್ ಗಿರಿಧರ್ ಪರವಾಗಿ ‘ಮಾತೃ ಲಾ ಫರ್ಮ್’ನ ಪ್ರಸಿದ್ಧ ವಕೀಲರಾದ ಬಿ. ಸಿದ್ದೇಶ್ವರ ಹಾಗೂ ರವಿ ಅವರು ನ್ಯಾಯಾಲಯದಲ್ಲಿ ಬಲವಾದ ವಾದ ಮಂಡಿಸಿದರು.
“ಅರ್ಜಿದಾರರು ಕೇವಲ ಕಂಪನಿಯ ಉದ್ಯೋಗಿಯಾಗಿದ್ದಾರೆಯೇ ಹೊರತು, ಹೂಡಿಕೆಯ ಯಾವುದೇ ಮುಖ್ಯ ನಿರ್ಧಾರ ಅಥವಾ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಕಳೆದ ಆರು ವರ್ಷಗಳಿಂದ ಸಂಸ್ಥೆಯು ಸುಸೂತ್ರವಾಗಿ ವಹಿವಾಟು ನಡೆಸುತ್ತಿದ್ದು, ಸಾರ್ವಜನಿಕರಿಗೆ ಮೋಸ ಮಾಡಿಲ್ಲ. ಇಲಾಖೆಯ ಅಧಿಕಾರಿಯೇ ದೂರು ನೀಡಿದ್ದಾರೆಯೇ ವಿನಃ ಸಾರ್ವಜನಿಕರು ಯಾರೂ ವಂಚನೆ ಕುರಿತು ದೂರು ಕೊಟ್ಟಿಲ್ಲ. ಆರೋಪಿಯು ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ” ಎಂದು ವಕೀಲರು ವಾದಿಸಿದರು.
ಸರ್ಕಾರಿ ಅಭಿಯೋಜಕರಿಲ್ಲದೆ ಸಿಕ್ಕ ಜಯ!
ವಿಶೇಷ ನ್ಯಾಯಾಲಯಕ್ಕೆ ಸರ್ಕಾರಿ ಅಭಿಯೋಜಕರು (Government Prosecutor) ನೇಮಕವಾಗದ ಕಾರಣ, ಸರ್ಕಾರದ ಪರವಾಗಿ ಈ ಜಾಮೀನು ಅರ್ಜಿಗೆ ಯಾವುದೇ ಲಿಖಿತ ಆಕ್ಷೇಪಣೆ ಸಲ್ಲಿಕೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ವಾದ ಹಾಗೂ ಸನ್ನಿವೇಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಬಾಲಚಂದ್ರ ಅವರು, ಅರ್ಜಿದಾರರ ಪರ ವಕೀಲರ ವಾದವನ್ನು ಪುರಸ್ಕರಿಸಿ ಸಂದೀಪ್ ಗಿರಿಧರ್ ಅವರಿಗೆ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದರು.
ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ








