ವಿಜಯಪುರ: ಬೈಕ್ಗೆ ಟಿಪ್ಪರ್ ವಾಹನವೊಂದು ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಅತ್ಯಂತ ಕ್ರೂರವಾಗಿ ಸಾವನ್ನಪ್ಪಿರುವ ದುರಂತ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಲ್ಲಿ ನಡೆದಿದೆ.
ಚಡಚಣ ತಾಲ್ಲೂಕಿನ ಮರೂರು ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಈ ಜವರಾಯನ ಅಟ್ಟಹಾಸ ನಡೆದಿದೆ.
ಮೃತರ ವಿವರ:
ಅಪಘಾತದಲ್ಲಿ ಗೋರನಾಳ ಗ್ರಾಮದ ನಿವಾಸಿಗಳಾದ ಧರ್ಮಣ್ಣಾ ಹೊಸಮನಿ (41) ಮತ್ತು ಬೀರಪ್ಪ ಪೂಜಾರಿ (25) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಸ್ಥಳದಲ್ಲೇ ಹಾರಿಹೋಯಿತು ಪ್ರಾಣ ಪಕ್ಷಿ:
ಧರ್ಮಣ್ಣಾ ಮತ್ತು ಬೀರಪ್ಪ ಇಬ್ಬರೂ ಬೈಕ್ನಲ್ಲಿ ರಾಷ್ಟ್ರೀಯ ಹೆದ್ದಾರಿ 52ರ ಮೂಲಕ ಚಡಚಣ ತಾಲ್ಲೂಕಿನ ಮರಗೂರು ಮಾರ್ಗವಾಗಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಇವರ ಬೈಕ್ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸವಾರರು ಹೆದ್ದಾರಿಗೆ ಬಿದ್ದು ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಭೀಕರ ಅಪಘಾತದ ಕುರಿತು ಸದ್ಯ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಟಿಪ್ಪರ್ ಚಾಲಕನ ವಿರುದ್ಧ ತನಿಖೆ ಕೈಗೊಂಡಿದ್ದಾರೆ. ಒಟ್ಟಿಗೆ ಇಬ್ಬರು ಯುವಕರನ್ನು ಕಳೆದುಕೊಂಡ ಗೋರನಾಳ ಗ್ರಾಮದಲ್ಲಿ ಕಣ್ಣೀರಿನ ಕಡಲು ಹರಿದಿದೆ.








