ಮಂಡ್ಯ: ಜಿಲ್ಲೆಯ ಮಾರದೇವನಹಳ್ಳಿಯಲ್ಲಿರುವ ಉಚಿತ ಗುರುಕುಲ ಶ್ರೀ ಸತ್ಯ ಸಾಯಿ ಶಾರದಾನಿಕೇತನಂ ವಿದ್ಯಾಸಂಸ್ಥೆಯ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿ ಹೊಸ ದಾಖಲೆ ಬರೆದಿದ್ದಾರೆ.
6ನೇ ತರಗತಿಯಿಂದ 12ನೇ ತರಗತಿಯವರೆಗೆ ಉಚಿತ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಹೆಸರು ಮಾಡಿರುವ ಈ ಸತ್ಯ ಸಾಯಿ ವಿದ್ಯಾಸಂಸ್ಥೆಯು, ಏಪ್ರಿಲ್ ತಿಂಗಳಲ್ಲಿ ನಡೆದ 12ನೇ ತರಗತಿಯ (ಸೀನಿಯರ್ ಸೆಕೆಂಡರಿ) ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ಪ್ರಕಟವಾಗಿದೆ.
ಗುರುಕುಲದ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ 55 ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆಗೆ( NIOS ಪಠ್ಯಕ್ರಮ) ಹಾಜರಾಗಿದ್ದು, ಎಲ್ಲಾ 55 ವಿದ್ಯಾರ್ಥಿಗಳು ಸಹ ಡಿಸ್ಟಿಂಕ್ಷನ್ (75% ಮೇಲೆ) ನಲ್ಲಿ ತೇರ್ಗಡೆಯಾಗಿದ್ದಾರೆ. ಮೂವರು ವಿದ್ಯಾರ್ಥಿಗಳು ಶೇಕಡಾ ನೂರರಷ್ಟು ಅಂಕ ಗಳಿಸಿದ್ದಾರೆ. ಡಾಟಾ ಎಂಟ್ರಿ ಮತ್ತು ಆಪರೇಷನ್ (DEO) ವಿದ್ಯಾರ್ಥಿಗಳಾದ ಸುನಿಲ್ ಹೆಗ್ಗರಡ್ಡಿ, ಕಿರಣ್ ಎಂ ಪಿ ಹಾಗೂ ಗಿರೀಶ್ ಕೆ ಅವರು ಶೇಕಡಾ ನೂರು ಅಂಕ ಗಳಿಸಿದ್ದಾರೆ.

ಈ ಕುರಿತು ಮಾತನಾಡಿದ ಗುರುಕುಲಾಧ್ಯಕ್ಷ ಗೌರವ್ ಎಂ, ಶಿಕ್ಷಕ ಸಿಬ್ಬಂದಿಯ ಮುಖ್ಯಸ್ಥರಾದ ಹರ್ಷವರ್ಧನ, ಮಕ್ಕಳ ಈ ಸರ್ವತೋಮುಖ ಅಭಿವೃದ್ಧಿ ಮತ್ತು ಶೈಕ್ಷಣಿಕ ಪರೀಕ್ಷೆಗಳಲ್ಲಿನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಗುರುಕುಲವು 2022 ರಿಂದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಪಠ್ಯಕ್ರಮವನ್ನು ಅನುಸರಿಸುತ್ತಿದ್ದು, ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿರುವ ಸತ್ಯ ಸಾಯಿ ಶಿಕ್ಷಣಸಂಸ್ಥೆಗಳ ಅಂಗ ಸಂಸ್ಥೆಯಾಗಿದೆ.
ಮಂಡ್ಯದ ಸತ್ಯ ಸಾಯಿ ಗುರುಕುಲವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯ ಮತ್ತು ಅಧ್ಯಯನ ಮಾರ್ಗದರ್ಶನದ ಜೊತೆಗೆ ಭಾರತೀಯ ಸಂಸ್ಕೃತಿ ಮತ್ತು ಅಧ್ಯಾತ್ಮ – ಭಗವದ್ಗೀತೆ, ರಾಮಾಯಣ, ಮಹಾಭಾರತ, ಉಪನಿಷತ್ತುಗಳು, ಅಧ್ಯಾತ್ಮ ಸಂಗೀತ ಸೇರಿದಂತೆ ಹತ್ತು ಹಲವು ವಿಷಯಗಳ ಆಧಾರಿತವಾಗಿ ಬೋಧನೆಯನ್ನು ನೀಡುತ್ತದೆ. ಇಲ್ಲಿ ವಿದ್ಯಾರ್ಥಿಯು ಒಂದು ಜೊತೆ ಬಟ್ಟೆ ಉಟ್ಟು ಸೇರಿದರೆ ಸಾಕು. ಗುರುಕುಲವೇ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿ ಉಚಿತ ಶಿಕ್ಷಣವನ್ನು ನೀಡುತ್ತದೆ.
ಇದೇ ಸಂದರ್ಭದಲ್ಲಿ ಶಿಕ್ಷಕವೃಂದದ ಸಂಗನಗೌಡ ಆಚಾರ್ಯ (ಸಂಸ್ಕೃತ), ರಘು (ಇಂಗ್ಲಿಷ್), ಸುಹಾಸ್ (ಕಂಪ್ಯೂಟರ್), ಗಂಗಪ್ಪ (ಇತಿಹಾಸ), ಉಮಾಕಾಂತ ಬಿರಾದಾರ (ಅರ್ಥಶಾಸ್ತ್ರ), ವೆಂಕಟೇಶ್ (ದೈಹಿಕ ಶಿಕ್ಷಣ) ವಿದ್ಯಾರ್ಥಿ ನಿಲಯ ಪಾಲಕರಾದ ಕಾರ್ತಿಕ್ ಗೌಡ ಸಿ ಎಮ್, ಮುಕುಲ್ ಮಹೋದಯ ಶುಭ ಹಾರೈಸಿದ್ದಾರೆ.








