ಉಕ್ರೇನ್ ರಾಜಧಾನಿ ಕಿಲೀವ್ ಮೇಲೆ ರಷ್ಯಾ ನಡೆಸಿದ ಭೀಕರ ವೈಮಾನಿಕ ದಾಳಿಯಿಂದಾಗಿ ಉಕ್ರೇನ್ನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಸಂಕೇತವಾಗಿರುವ ‘ಕಿಲೀವ್ ಪೆಚೆರ್ಸ್ಕ್ ಲಾವ್ರಾ’ (Kyiv Pechersk Lavra) ಮಠದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 13 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಮುಂಜಾನೆ ತಿಳಿಸಿದ್ದಾರೆ.
ಅಲ್ಲದೆ ನಿವಾಸಿಗಳು ತಕ್ಷಣವೇ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಮನವಿ ಮಾಡಿದ್ದಾರೆ.ರಷ್ಯಾದ ವೈಮಾನಿಕ ದಾಳಿಯಿಂದಾಗಿ ನಗರದ ಪ್ರಮುಖ ವಿದ್ಯುತ್ ಲೈನ್ಗಳು ಹಾನಿಗೊಳಗಾಗಿದ್ದು, ಸುಮಾರು 1,40,000 ಕಿಲೀವ್ ನಿವಾಸಿಗಳು ಕತ್ತಲೆಯಲ್ಲಿ ಮುಳುಗಿದ್ದಾರೆ ಎಂದು ಮೇಯರ್ ವಿಟಾಲಿ ಕ್ಲಿಟ್ಸ್ಕೊ ಟೆಲಿಗ್ರಾಮ್ ಸಂದೇಶ ಆಪ್ನಲ್ಲಿ ತಿಳಿಸಿದ್ದಾರೆ. ಡ್ರೋನ್ಗಳ ಅವಶೇಷಗಳು ಬಿದ್ದಿದ್ದರಿಂದ ಕೆಲವು ಮನೆಗಳು ಮತ್ತು ಕಾರುಗಳಿಗೂ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಸೇರಿಸಿದ್ದಾರೆ.
ಯುನೆಸ್ಕೋ (UNESCO) ವಿಶ್ವ ಪರಂಪರೆಯ ಪಟ್ಟಿಗೆ ಸೇರಿರುವ ಮಧ್ಯ ಕಿಲೀವ್ನ ಈ ಐತಿಹಾಸಿಕ ಮಠವು ರಷ್ಯಾದ ನೇರ ದಾಳಿಯಿಂದಾಗಿ ತೀವ್ರವಾಗಿ ಹಾನಿಗೊಳಗಾಗಿದೆ ಎಂದು ರಾಜಧಾನಿಯ ಮಿಲಿಟರಿ ಆಡಳಿತದ ಮುಖ್ಯಸ್ಥ ಟೈಮರ್ ಟ್ಕಚೆಂಕೊ ಪ್ರತ್ಯೇಕ ಟೆಲಿಗ್ರಾಮ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
”ನಮ್ಮ ಜನರು ಮತ್ತು ನಮ್ಮ ಪರಂಪರೆಯ ಮೇಲಿನ ಅತ್ಯಂತ ಕ್ರೂರ ದಾಳಿ ಇದಾಗಿದೆ. ರಷ್ಯಾದ ಆರ್ಥೊಡಾಕ್ಸ್ ಮೌಲ್ಯಗಳ ನೈಜ ಮುಖ ಏನೆಂಬುದು ಇದರಿಂದ ಜಗತ್ತಿಗೆ ಗೊತ್ತಾಗುತ್ತದೆ” ಎಂದು ಉಕ್ರೇನ್ ಪ್ರಧಾನಿ ಯುಲಿಯಾ ಸ್ವೈರಿಡೆಂಕೊ ಅವರು ‘X’ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಅವರು ಹಂಚಿಕೊಂಡಿರುವ ಪೋಸ್ಟ್ನಲ್ಲಿ ಮಠದ ಕಟ್ಟಡಗಳು ಬೆಂಕಿಯ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿರುವುದು ಕಂಡುಬಂದಿದೆ.
ಕಿಲೀವ್ ಅಧಿಕಾರಿಗಳ ಪ್ರಕಾರ, ಇಡೀ ನಗರವು ರಷ್ಯಾದ ಬೃಹತ್ ಕ್ಷಿಪಣಿ ದಾಳಿಗೆ ತುತ್ತಾಗಿದ್ದು, ಬಹುಮಹಡಿ ಅಪಾರ್ಟ್ಮೆಂಟ್ ಕಟ್ಟಡವೊಂದಕ್ಕೂ ಬೆಂಕಿ ಹೊತ್ತಿಕೊಂಡಿದೆ.
ರಷ್ಯಾದ ಡ್ರೋನ್ಗಳು ಕಿಲೀವ್ ನಗರದ ಮೇಲೆ ವಿವಿಧ ದಿಕ್ಕುಗಳಿಂದ ನಿರಂತರವಾಗಿ ದಾಳಿ ನಡೆಸುತ್ತಲೇ ಇವೆ ಎಂದು ಉಕ್ರೇನ್ ವಾಯುಪಡೆ ಟೆಲಿಗ್ರಾಮ್ನಲ್ಲಿ ತಿಳಿಸಿದೆ. ಇಡೀ ನಗರದಲ್ಲಿ ಭಾರಿ ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ ಎಂದು ರಾಯಿಟರ್ಸ್ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಈ ಭೀಕರ ದಾಳಿಯ ಬೆನ್ನಲ್ಲೇ ಉಕ್ರೇನ್ನ ನೆರೆಹೊರೆಯ ರಾಷ್ಟ್ರ ಹಾಗೂ ಯುರೋಪಿಯನ್ ಯೂನಿಯನ್ ಮತ್ತು ನಾಟೋ (NATO) ಸದಸ್ಯ ದೇಶವಾಗಿರುವ ಪೋಲೆಂಡ್, ಮುನ್ನೆಚ್ಚರಿಕಾ ಕ್ರಮವಾಗಿ ತನ್ನ ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಗಾಳಿಗಿಳಿಸಿದೆ. ಜೊತೆಗೆ ತನ್ನ ನೆಲದ ಮೇಲಿನ ವಾಯು ರಕ್ಷಣಾ ವ್ಯವಸ್ಥೆ ಹಾಗೂ ರಾಡಾರ್ ಕಣ್ಗಾವಲು ವ್ಯವಸ್ಥೆಯನ್ನು ಹೈ ಅಲರ್ಟ್ನಲ್ಲಿ ಇರಿಸಿದೆ ಎಂದು ಪೋಲೆಂಡ್ ಸಶಸ್ತ್ರ ಪಡೆಗಳು ‘X’ ನಲ್ಲಿ ತಿಳಿಸಿವೆ.
ಸೋಮವಾರ ಮುಂಜಾನೆಯ ವೇಳೆಗೆ ಉಕ್ರೇನ್ನ ಬಹುತೇಕ ಎಲ್ಲಾ ಭೂಭಾಗಗಳಲ್ಲೂ ವಾಯುದಾಳಿಯ ಸೈರನ್ಗಳು ಮೊಳಗಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ ಉಕ್ರೇನ್ನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕಿವ್ (Kharkiv) ಮೇಲೂ ರಷ್ಯಾ ಎರಡನೇ ಬಾರಿ ಭೀಕರ ದಾಳಿ ನಡೆಸಿದೆ. ಮೊದಲ ದಾಳಿಯ ನಂತರ ಅಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಐವರು ತುರ್ತು ಸೇವಾ ಸಿಬ್ಬಂದಿ ಈ ದಾಳಿಯಲ್ಲಿ ಸಾವನ್ನಪ್ಪಿದ್ದು, ಕನಿಷ್ಠ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವ ಇಹೋರ್ ಕ್ಲಿಮೆಂಕೊ ಟೆಲಿಗ್ರಾಮ್ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಡ್ನಿಪ್ರೊ (Dnipro) ಪ್ರದೇಶದ ಮೇಲೂ ದಾಳಿಗಳು ನಡೆದಿರುವುದಾಗಿ ಸ್ಥಳೀಯ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಖಚಿತಪಡಿಸಿದ್ದಾರೆ.








