ಬೆಂಗಳೂರು: ರಾಜ್ಯದಲ್ಲಿ ಸಬ್ಸಿಡಿ (ಸಹಾಯಧನ) ದರದ ರಸಗೊಬ್ಬರಗಳನ್ನು ಗರಿಷ್ಠ ಮಾರಾಟ ಬೆಲೆಗಿಂತ (MRP) ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಮತ್ತು ರಸಗೊಬ್ಬರಗಳ ಜೊತೆಗೆ ರೈತರಿಗೆ ಇಷ್ಟವಿಲ್ಲದ ಬೇರೆ ಕೃಷಿ ಪರಿಕರಗಳನ್ನು ಕಡ್ಡಾಯವಾಗಿ ಲಿಂಕ್ ಮಾಡಿ ಮಾರಾಟ ಮಾಡುತ್ತಿರುವ ಕೃಷಿ ಪರಿಕರ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಆಯುಕ್ತರ ಕಚೇರಿ ಕಟು ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಕೆಲವು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸ್ವತಃ ರೈತರಿಂದ ಬಂದಿರುವ ದೂರು ಮತ್ತು ಮನವಿಗಳನ್ನು ಪುರಸ್ಕರಿಸಿ ಕೃಷಿ ಇಲಾಖೆಯು ಈ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ನಿಯಮಗಳ ಉಲ್ಲಂಘನೆ: ಸಹಾಯಧನ ಹೊಂದಿದ ರಸಗೊಬ್ಬರಗಳನ್ನು ನಿಗದಿಪಡಿಸಿದ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರುವುದಾಗಲಿ ಅಥವಾ ರಸಗೊಬ್ಬರದೊಂದಿಗೆ ರೈತರು ಇಚ್ಛಿಸದ ಇತರ ಕೃಷಿ ಪರಿಕರಗಳನ್ನು ಕಡ್ಡಾಯವಾಗಿ ಲಿಂಕ್ ಮಾಡಿ ಮಾರಾಟ ಮಾಡುವುದು “ರಸಗೊಬ್ಬರ ನಿಯಂತ್ರಣ ಆದೇಶ, 1985” (Fertilizer Control Order, 1985 – FCO) ಮತ್ತು “ಅಗತ್ಯ ವಸ್ತುಗಳ ಕಾಯ್ದೆ, 1955” (Essential Commodities Act, 1955) ರ ಅಡಿಯಲ್ಲಿ ಗಂಭೀರ ಉಲ್ಲಂಘನೆಯಾಗಿದೆ.
ಕಠಿಣ ಕ್ರಮದ ಎಚ್ಚರಿಕೆ: ಈ ರೀತಿಯ ಉಲ್ಲಂಘನೆಗಳು ಕಂಡುಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ (ECA, 1955) ರನ್ವಯ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು.
ಯಾವುದೇ ಕಾರಣಕ್ಕೂ ಲಿಂಕ್ ಮಾರಾಟ ಬೇಡ: ಯಾವುದೇ ಕಾರಣಕ್ಕೂ ರಿಯಾಯಿತಿ ದರದ ರಸಗೊಬ್ಬರಗಳೊಂದಿಗೆ ಇತರೆ ಕೃಷಿ ಪರಿಕರಗಳನ್ನು ಒತ್ತ್ಯಾಯ ಪೂರ್ವಕವಾಗಿ ರೈತರಿಗೆ ಮಾರಾಟ ಮಾಡಬಾರದು ಮತ್ತು ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಬಾರದು ಎಂದು ಮಾರಾಟಗಾರರಿಗೆ ಮತ್ತೊಮ್ಮೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಈ ಆದೇಶದ ಪ್ರತಿಯನ್ನು ಅಗತ್ಯ ಕ್ರಮಗಳಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರಿಗೆ, ಎಲ್ಲಾ ರಸಗೊಬ್ಬರ ತಯಾರಿಕಾ ಸಂಸ್ಥೆಗಳಿಗೆ ಹಾಗೂ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಎಲ್ಲಾ ಜಿಲ್ಲಾ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರಿಗೆ ರವಾನಿಸಲಾಗಿದೆ.
ರೈತರು ಇಂತಹ ಯಾವುದೇ ಅಕ್ರಮ ಅಥವಾ ಶೋಷಣೆಗೆ ಒಳಗಾಗುತ್ತಿದ್ದರೆ ತಕ್ಷಣವೇ ತಮ್ಮ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲು ಕೋರಲಾಗಿದೆ.









