ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಶುದ್ಧ ಇಂಧನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನಿಟ್ಟಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಭಾರತವು ಶೇ. 100 ರಷ್ಟು ಎಥನಾಲ್ ಇಂಧನಕ್ಕೆ ಅಧಿಕೃತವಾಗಿ ಕಾನೂನು ಮಾನ್ಯತೆ ನೀಡಿದೆ ಎಂದು ಪ್ರಕಟಿಸಿದ್ದಾರೆ. ಇದರರ್ಥ ಇನ್ನು ಮುಂದೆ ವಾಹನಗಳು ಸಂಪೂರ್ಣವಾಗಿ ಎಥನಾಲ್ ಇಂಧನದಲ್ಲೇ ಚಲಿಸಲು ಅನುಮತಿ ಸಿಗಲಿದೆ.
ಶನಿವಾರ ನಾಗ್ಪುರದಲ್ಲಿ ನರೇಂದ್ರ ಮೋದಿ ಸರ್ಕಾರದ 12 ವರ್ಷಗಳ ಆಡಳಿತ ಪೂರ್ಣಗೊಂಡ ನೆನಪಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, “ಈ ಅನುಮೋದನೆಯು ಎಥನಾಲ್ ಇಂಧನವನ್ನು ‘ಪೆಟ್ರೋಲ್ಗೆ ಅತ್ಯುತ್ತಮ ಪರ್ಯಾಯ’ವಾಗಿ ಹೊರಹೊಮ್ಮುವಂತೆ ಮಾಡುತ್ತದೆ. ಇದು ಭಾರತಕ್ಕೆ ವಾರ್ಷಿಕವಾಗಿ ಪಳೆಯುಳಿಕೆ ಇಂಧನ ಆಮದಿಗಾಗಿ ತಗಲುವ ಬರೋಬ್ಬರಿ 22 ಲಕ್ಷ ಕೋಟಿ ರೂಪಾಯಿಗಳ ಭಾರಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ಶೇ. 100 ರಷ್ಟು ಎಥನಾಲ್ ಇಂಧನದ ನಿಯಂತ್ರಕ ಚೌಕಟ್ಟನ್ನು ಪೂರ್ಣಗೊಳಿಸುವ ಕಡತಕ್ಕೆ ಶುಕ್ರವಾರ ತಡರಾತ್ರಿ ಅಧಿಕೃತವಾಗಿ ಸಹಿ ಹಾಕಿರುವುದನ್ನು ಗಡ್ಕರಿ ದೃಢಪಡಿಸಿದರು.
”ನಿನ್ನೆ ರಾತ್ರಿ ಸುಮಾರು 8 ಗಂಟೆಗೆ, ನಾನು ಶೇ. 100 ರಷ್ಟು ಎಥನಾಲ್ ನಿಯಮಗಳನ್ನು ರೂಪಿಸುವ ಮತ್ತು ಅದಕ್ಕೆ ಕಾನೂನು ಪ್ರಕ್ರಿಯೆಯನ್ನು ನೀಡುವ ಕಡತಕ್ಕೆ ಸಹಿ ಹಾಕಿದ್ದೇನೆ” ಎಂದು ಅವರು ತಿಳಿಸಿದರು.
ಭಾರತವು ಈಗ ವಾಹನಗಳು ಎಥನಾಲ್ನಲ್ಲಿ ಚಲಿಸಲು ಅನುಮತಿ ನೀಡಿದ್ದರೂ, ಸದ್ಯ ರಸ್ತೆಯಲ್ಲಿರುವ ಹೆಚ್ಚಿನ ಕಾರುಗಳು E85 ಮತ್ತು E100 ಎರಡಕ್ಕೂ ಹೊಂದಿಕೊಳ್ಳುವುದಿಲ್ಲ. ಏಕೆಂದರೆ ಅವುಗಳನ್ನು ಸಾಮಾನ್ಯ ಗ್ಯಾಸೋಲಿನ್ ಅಥವಾ ಕಡಿಮೆ-ಎಥನಾಲ್ ಮಿಶ್ರಣಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಅವುಗಳಲ್ಲಿ ಅಗತ್ಯ ಹಾರ್ಡ್ವೇರ್ ಮತ್ತು ಎಂಜಿನ್ ಕ್ಯಾಲಿಬ್ರೇಶನ್ ಇರುವುದಿಲ್ಲ.
ಇತ್ತೀಚೆಗಷ್ಟೇ ಮಾರುತಿ ಸುಜುಕಿ, ಹೀರೋ ಮೋಟೋಕಾರ್ಪ್, ಟೊಯೋಟಾ, ಸುಜುಕಿ ಮತ್ತು ಹ್ಯುಂಡೈನಂತಹ ಪ್ರಮುಖ ವಾಹನ ತಯಾರಕ ಕಂಪನಿಗಳು ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಣದಲ್ಲಿ ಚಲಿಸಬಲ್ಲ ‘ಫ್ಲೆಕ್ಸ್-ಫ್ಯುಯೆಲ್’ (Flex-Fuel) ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ರಾರಂಭಿಸಿವೆ.
ರೈತರಿಂದಲೇ ಸಿಗಲಿದೆ ಇಂಧನ:
ಎಥನಾಲ್ ಎಂಬುದು ಪ್ರಮುಖವಾಗಿ ಕಬ್ಬು, ಜೋಳ ಮತ್ತು ಇತರ ಕೃಷಿ ಉತ್ಪನ್ನಗಳಿಂದ ತಯಾರಾಗುವ ಒಂದು ನವೀಕರಿಸಬಹುದಾದ ಜೈವಿಕ ಇಂಧನವಾಗಿದೆ (Biofuel). ಭಾರತದಲ್ಲಿ ಹೆಚ್ಚಿನ ಎಥನಾಲ್ ಅನ್ನು ಕಬ್ಬಿನ ಉಪ ಉತ್ಪನ್ನವಾದ ಕಾಕಂಬಿ (Molasses) ಯಿಂದ ಪಡೆಯಲಾಗುತ್ತದೆ. ಇದನ್ನು ಪೆಟ್ರೋಲ್ ಜೊತೆಗೆ ವಿಭಿನ್ನ ಪ್ರಮಾಣದಲ್ಲಿ ಮಿಶ್ರಣ ಮಾಡಬಹುದು ಅಥವಾ ವಿಶೇಷವಾಗಿ ವಿನ್ಯಾಸಗೊಳಿಸಲಾದ ಫ್ಲೆಕ್ಸ್-ಫ್ಯುಯೆಲ್ ವಾಹನಗಳಲ್ಲಿ ನೇರ ಇಂಧನವಾಗಿಯೂ ಬಳಸಬಹುದು.
ಇಂಧನದಲ್ಲಿ ಎಥನಾಲ್ ಮಿಶ್ರಣ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಗಳಿಸುತ್ತಿದೆ. ಹಲವು ದೇಶಗಳಲ್ಲಿ ಶೇ. 5 ರಿಂದ 10 ರಷ್ಟು ಕಡಿಮೆ ಮಟ್ಟದ ಮಿಶ್ರಣದಿಂದ ಇದು ಪ್ರಾರಂಭವಾಯಿತು. ನವೀಕರಿಸಬಹುದಾದ ಇಂಧನ ಅಳವಡಿಕೆಗೆ ಸರ್ಕಾರಗಳು ಒತ್ತು ನೀಡಿದ್ದರಿಂದ, ಹಲವಾರು ಮಾರುಕಟ್ಟೆಗಳಲ್ಲಿ ಇದರ ಪ್ರಮಾಣವು ಕ್ರಮೇಣ ಶೇ. 20 ಕ್ಕೆ (E20) ಏರಿತು. ಇತ್ತೀಚೆಗೆ, ಬಲವಾದ ಫ್ಲೆಕ್ಸ್-ಫ್ಯುಯೆಲ್ ವಾಹನ ಕಾರ್ಯಕ್ರಮಗಳನ್ನು ಹೊಂದಿರುವ ಬ್ರೆಜಿಲ್ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ E85 (ಶೇ. 85 ರಷ್ಟು ಎಥನಾಲ್) ನಂತಹ ಪ್ರತ್ಯೇಕ ಉನ್ನತ-ಎಥನಾಲ್ ಇಂಧನಗಳು ಮುಂಚೂಣಿಗೆ ಬಂದಿವೆ.
ದೇಶೀಯವಾಗಿಯೇ ಹೆಚ್ಚಿನ ಇಂಧನವನ್ನು ಉತ್ಪಾದಿಸುವುದು ಮತ್ತು ಪೆಟ್ರೋಲ್ ಹಾಗೂ ಡೀಸೆಲ್ಗೆ ಪರ್ಯಾಯಗಳನ್ನು ಸಿದ್ಧಪಡಿಸುವುದು ಸರ್ಕಾರದ ಗುರಿಯಾಗಿದೆ ಎಂದು ಗಡ್ಕರಿ ವಿವರಿಸಿದರು. “ದೇಶವು 22 ಲಕ್ಷ ಕೋಟಿ ರೂಪಾಯಿಗಳ ಆಮದು ಹೊರೆಯನ್ನು ಹೊಂದಿದೆ. ಈಗ ಈ ಆಮದನ್ನು ಕಡಿಮೆ ಮಾಡಲು ನಾವು ಮಾಡಿರುವ ಸಂಕಲ್ಪದ ಭಾಗವಾಗಿ… ದೇಶದಲ್ಲೇ ಕ್ರಮೇಣ ಗ್ಯಾಸ್ ಕೂಡ ಉತ್ಪಾದನೆಯಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ಗೆ ಪರ್ಯಾಯವೂ ಸಿದ್ಧವಾಗಲಿದೆ” ಎಂದು ಗಡ್ಕರಿ ಹೇಳಿದರು.
ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ಕಂಪನಿಗಳು ಶೀಘ್ರದಲ್ಲೇ ಶೇ. 100 ರಷ್ಟು ಎಥನಾಲ್ ವಾಹನಗಳನ್ನು ಅಳವಡಿಸಿಕೊಳ್ಳಲಿವೆ ಎಂದು ಸಚಿವರು ತಿಳಿಸಿದರು. ತಾವು ಈಗಾಗಲೇ ಶೇ. 100 ರಷ್ಟು ಎಥನಾಲ್ನಲ್ಲಿ ಚಲಿಸುವ ಮಾರುತಿ ಸುಜುಕಿ ವ್ಯಾಗನ್ಆರ್ (WagonR) ಫ್ಲೆಕ್ಸ್-ಫ್ಯುಯೆಲ್ ಮಾದರಿಯನ್ನು ಬಿಡುಗಡೆ ಮಾಡಿರುವುದನ್ನು ಅವರು ನೆನಪಿಸಿಕೊಂಡರು. ಭಾರತದಲ್ಲಿ ಮಾರಾಟವಾಗುವ ಪ್ರತಿ ಐದು ದ್ವಿಚಕ್ರ ವಾಹನಗಳಲ್ಲಿ ಮೂರನ್ನು ಮಾರಾಟ ಮಾಡುವ ಹೀರೋ ಮೋಟೋಕಾರ್ಪ್ ಕೂಡ ಶೇ. 100 ರಷ್ಟು ಎಥನಾಲ್ನಲ್ಲಿ ಚಲಿಸಬಲ್ಲ ಫ್ಲೆಕ್ಸ್-ಫ್ಯುಯೆಲ್ ಬೈಕ್ಗಳನ್ನು ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.
”ಮುಂದಿನ ಎರಡು ತಿಂಗಳುಗಳಲ್ಲಿ ಟೊಯೋಟಾ, ಸುಜುಕಿ ಮತ್ತು ಹ್ಯುಂಡೈನಂತಹ ಪ್ರಮುಖ ಆಟೋಮೊಬೈಲ್ ಕಂಪನಿಗಳು ಸಂಪೂರ್ಣವಾಗಿ ಶೇ. 100 ರಷ್ಟು ಎಥನಾಲ್ನಲ್ಲಿ ಚಲಿಸುವ ವಾಹನಗಳನ್ನು ಮಾರುಕಟ್ಟೆಗೆ ತರಲಿವೆ” ಎಂದು ಗಡ್ಕರಿ ಮಾಹಿತಿ ನೀಡಿದರು.
ಸರ್ಕಾರದ ಪ್ರಕಾರ, ಶೇ. 100 ರಷ್ಟು ಎಥನಾಲ್ ಅಳವಡಿಕೆಯು ಇಂಧನ ಸುರಕ್ಷತೆ ಮತ್ತು ಇಂಧನ ಸ್ವಾವಲಂಬನೆಯ ಕಡೆಗೆ ಭಾರತ ಇಟ್ಟಿರುವ ಆಯಾಕಟ್ಟಿನ ಹೆಜ್ಜೆಯಾಗಿದ್ದು, ಇದು ಭಾರತದ ಆಮದು ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದು ವಾಹನ ತಯಾರಕರಿಗೆ ಎಥನಾಲ್ನಲ್ಲಿ ಮಾತ್ರ ಚಲಿಸಬಲ್ಲ ಫ್ಲೆಕ್ಸ್-ಫ್ಯುಯೆಲ್ ವಾಹನಗಳನ್ನು ತಯಾರಿಸಲು ಉತ್ತಮ ಅವಕಾಶವನ್ನು ನೀಡುತ್ತದೆ, ಜೊತೆಗೆ ದೇಶೀಯ ಜೈವಿಕ ಇಂಧನ ಉದ್ಯಮಕ್ಕೆ ಬೆಂಬಲ ನೀಡುತ್ತದೆ ಮತ್ತು ಎಥನಾಲ್ ಕಚ್ಚಾ ವಸ್ತುಗಳನ್ನು ಉತ್ಪಾದಿಸುವ ರೈತರಿಗೆ ಆದಾಯದ ಹೊಸ ಮೂಲಗಳನ್ನು ಸೃಷ್ಟಿಸುತ್ತದೆ.








