ಮುಂಬೈ: ಸ್ಟ್ಯಾಂಡ್-ಅಪ್ ಕಮಿಡಿಯನ್ ಪ್ರಣಿತ್ ಮೋರೆ ಅವರ ಕಾರ್ಯಕ್ರಮದಲ್ಲಿ ಪುರುಷರ ಶವಗಳ (Cadavers) ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಮುಂಬೈನ ಕೆಇಎಂ (KEM) ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿನಿ ಸೇಜಲ್ ಪವಾರ್ ಅವರ ವಿರುದ್ಧ ಸಂಸ್ಥೆಯು ತನಿಖೆ ಆರಂಭಿಸಿದೆ. ಸದ್ಯಕ್ಕೆ ಅವರನ್ನು 15 ದಿನಗಳ ಕಾಲ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದ್ದು, ಆಸ್ಪತ್ರೆಯ ಆವರಣ, ವೈದ್ಯಕೀಯ ಕಾಲೇಜು ಮತ್ತು ಹಾಸ್ಟೆಲ್ ಆವರಣವನ್ನು ಪ್ರವೇಶಿಸದಂತೆ ನಿಷೇಧಿಸಲಾಗಿದೆ.
ಈ ಕಡ್ಡಾಯ ರಜೆಯು ಮಧ್ಯಂತರ ನಿರ್ಧಾರವಾಗಿದ್ದು, ವಿಷಯದ ಬಗ್ಗೆ ತನಿಖೆ ನಡೆಸಲು ಐದು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಏಳು ದಿನಗಳ ಒಳಗಾಗಿ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ (ANI) ವರದಿ ಮಾಡಿದೆ.
ಕಾಮೆಂಟ್ಗಳು ‘ಆಕ್ಷೇಪಾರ್ಹ ಮತ್ತು ಅಸೂಕ್ಷ್ಮ’ ಎಂದ ಸಮಿತಿ:
ಪರೇಲ್ನಲ್ಲಿರುವ ಸೇಥ್ ಜಿಎಸ್ ವೈದ್ಯಕೀಯ ಕಾಲೇಜು ಮತ್ತು ಕೆಇಎಂ ಆಸ್ಪತ್ರೆ ರಚಿಸಿದ್ದ ಸತ್ಯಶೋಧನಾ ಸಮಿತಿಯು, ಪವಾರ್ ಮಾಡಿದ ಕಾಮೆಂಟ್ಗಳು ‘ಆಕ್ಷೇಪಾರ್ಹ ಮತ್ತು ಅಸೂಕ್ಷ್ಮ’ವಾಗಿವೆ ಎಂದು ಪತ್ತೆಹಚ್ಚಿದೆ. ಅಧಿಕೃತ ಹೇಳಿಕೆಯಲ್ಲಿ ಸಮಿತಿಯು, ಆಕೆಯ ಕಾಮೆಂಟ್ಗಳು ವೈದ್ಯಕೀಯ ವಿದ್ಯಾರ್ಥಿನಿಯಿಂದ ನಿರೀಕ್ಷಿಸಲಾಗುವ ಘನತೆ, ಸಹಾನುಭೂತಿ ಮತ್ತು ವೃತ್ತಿಪರ ಜವಾಬ್ದಾರಿಗೆ ತಕ್ಕುದಾಗಿಲ್ಲ ಎಂದು ತಿಳಿಸಿದೆ.
ಆಡಳಿತ ಮಂಡಳಿಯು ಶನಿವಾರದಂದು ಪವಾರ್ ಅವರ ಪೋಷಕರು/ಪಾಲಕರನ್ನು ಸಂಸ್ಥೆಯ ಮುಂದೆ ಹಾಜರಾಗುವಂತೆ ತಿಳಿಸಿದ್ದು, ಆಕೆಯ ಕೌನ್ಸೆಲಿಂಗ್ಗೆ ವ್ಯವಸ್ಥೆ ಮಾಡಿದೆ.
ಏನಿದು ಸಂಪೂರ್ಣ ವಿವಾದ?
ಕಾಮಿಡಿಯನ್ ಮತ್ತು ಯೂಟ್ಯೂಬರ್ ಪ್ರಣಿತ್ ಮೋರೆ ಅವರು ಸುಮಾರು ಮೂರು ತಿಂಗಳ ಹಿಂದೆ ನಡೆಸಿಕೊಟ್ಟಿದ್ದ ಕಾರ್ಯಕ್ರಮದ ವಿಡಿಯೋ ತುಣುಕೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಪ್ರಾರಂಭಿಸಿದ ನಂತರ ಈ ವಿವಾದ ಭುಗಿಲೆದ್ದಿದೆ.
ಕಾರ್ಯಕ್ರಮದ ವೇಳೆ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವಾಗ, ಪ್ರಣಿತ್ ಮೋರೆ ಅವರು ಪವಾರ್ ಬಳಿ “ಶವಪರೀಕ್ಷೆ (Autopsy) ನಡೆಸುವಾಗ ವಿದ್ಯಾರ್ಥಿಗಳು ಗಂಭೀರವಾಗಿ ಇರುತ್ತಾರಾ ಅಥವಾ ಜೋಕ್ ಮಾಡುತ್ತಾರಾ?” ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ ಪವಾರ್, ತಾವು ಶವಗಳೊಂದಿಗೆ (Cadavers) ಅನ್ಯಾಟಮಿ (ದೇಹರಚನಾ ಶಾಸ್ತ್ರ) ತರಗತಿಯಲ್ಲಿ ನಡೆದ ಅನುಭವಗಳನ್ನು ಅಣಕಿಸುತ್ತೇವೆ ಎಂದು ಹೇಳಿದರು. ತಾವು ಮತ್ತು ತಮ್ಮ ಸಹಪಾಠಿಗಳು ಪುರುಷ ಶವಗಳ ಖಾಸಗಿ ಅಂಗಗಳ ಗಾತ್ರವನ್ನು ಹೋಲಿಕೆ ಮಾಡುತ್ತಿದ್ದೆವು ಎಂದು ಅವರು ಉಲ್ಲೇಖಿಸಿದಾಗ ವಿಷಯ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತು.
ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಅಸೂಕ್ಷ್ಮ, ಅಮಾನವೀಯ ಮತ್ತು ದೇಹದಾನಿಗಳಿಗೆ ಮಾಡಿದ ಅಪಮಾನ ಎಂದು ತೀವ್ರವಾಗಿ ಖಂಡಿಸಿದ್ದಾರೆ.
’ಇದರ ಜವಾಬ್ದಾರಿಯನ್ನು ನಾನು ಹೊರುತ್ತೇನೆ’: ಸೇಜಲ್ ಪವಾರ್
ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಪವಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕ್ಷಮೆಯಾಚಿಸಿದ್ದಾರೆ. “ನಾನು ಇಲ್ಲಿ ಹೇಳಿದ್ದನ್ನು ಸಮರ್ಥಿಸಿಕೊಳ್ಳಲು ಅಥವಾ ಅದಕ್ಕೆ ಸ್ಪಷ್ಟನೆ ನೀಡಲು ಬಂದಿಲ್ಲ. ನಾನು ಅದರ ಜವಾಬ್ದಾರಿಯನ್ನು ಹೊರುತ್ತೇನೆ,” ಎಂದು ಅವರು ಬರೆದುಕೊಂಡಿದ್ದಾರೆ.








