ಘಟನೆಯ ಹಿನ್ನೆಲೆ:
ಸಾಗರ ಟೌನ್ನ ಎಸ್.ಎನ್. ನಗರದ ನಿವಾಸಿಯಾದ ಸಂತ್ರಸ್ತ ಮಹಿಳಾ ನೌಕರರೊಬ್ಬರು ಸಾಗರ ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೂನ್ 08, 2026 ರಂದು ಬೆಳಗ್ಗೆ 6:30ರ ಸುಮಾರಿಗೆ ಎಂದಿನಂತೆ ಅವರು ಕೆಲಸಕ್ಕೆ ಹಾಜರಾಗಿದ್ದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಗರಸಭೆಯ ಮೇಸ್ತ್ರಿಯಾಗಿರುವ ನಾಗರಾಜ್ ಬಿನ್ ಮಾಣಿಕ್ಯ ಎಂಬಾತನು ತನಗೆ ಮೊದಲಿನಿಂದಲೂ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಾ ಬಂದಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ದೂರಿನಲ್ಲಿ ಏನಿದೆ?:
“ಜೂನ್ 8 ರಂದು ಕೆಲಸದ ಅವಧಿಯಲ್ಲಿ ನಾಗರಾಜ್ ನನ್ನ ಕೈ ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದನ್ನು ನಾನು ಪ್ರತಿಭಟಿಸಿ, ‘ಇದೆಲ್ಲ ಸರಿಯಲ್ಲ’ ಎಂದು ಹೇಳಿದಾಗ, ಆತ ಅಸಭ್ಯವಾಗಿ ಮಾತನಾಡಿದ್ದಾನೆ. ‘ನೀನು ಚೆನ್ನಾಗಿದ್ದೀಯಾ, ನಿನ್ನನ್ನು ಒಂದು ದಿನವಾದರೂ ಅನುಭವಿಸದೇ ಬಿಡುವುದಿಲ್ಲ. ನನ್ನ ಕೆಲಸ ಮುಗಿಸಿಯೇ ತೀರುತ್ತೇನೆ’ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ” ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾನೂನು ಕ್ರಮಕ್ಕೆ ಆಗ್ರಹ:
ಈ ಘಟನೆಯಿಂದ ತೀವ್ರವಾಗಿ ಹೆದರಿದ ಮಹಿಳೆಯು ಅಂದು ಕೆಲಸಕ್ಕೆ ಹಾಜರಾಗದೆ ತಕ್ಷಣ ಮನೆಗೆ ಮರಳಿದ್ದಾರೆ. ತನಗೆ ಕಚೇರಿಯಲ್ಲಿ ಎದುರಾದ ಕಹಿ ಅನುಭವ ಮತ್ತು ದೌರ್ಜನ್ಯದ ಕುರಿತು ತನ್ನ ಪತಿಯ ಬಳಿ ಹೇಳಿಕೊಂಡಿದ್ದಾರೆ. ತದನಂತರ ಧೈರ್ಯ ಮಾಡಿ ಅಧಿಕಾರಿಗಳ ಮೊರೆ ಹೋಗಿದ್ದಾರೆ.
ಕೆಲಸದ ಅವಧಿಯಲ್ಲಿ ಮಹಿಳಾ ನೌಕರರ ಮೇಲೆ ಈ ರೀತಿಯ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಮೇಸ್ತ್ರಿ ನಾಗರಾಜ್ ವಿರುದ್ಧ ಅತಿ ಶೀಘ್ರವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತನಗೆ ನ್ಯಾಯ ಒದಗಿಸಬೇಕು ಎಂದು ನೊಂದ ಮಹಿಳೆ ಮಹಿಳಾ ಆಯೋಗವನ್ನು ಪ್ರಾರ್ಥಿಸಿದ್ದಾರೆ.
ಸದ್ಯ ಈ ದೂರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು…