ಬೀದರ್: ಜಿಲ್ಲೆಯ ಔರಾದ್ ತಾಲೂಕಿನಲ್ಲಿ ತೀವ್ರ ವಿಷಾದನೀಯ ಘಟನೆಯೊಂದು ಸಂಭವಿಸಿದೆ. ಮನೆಯಲ್ಲಿ ಊಟದ ಬಳಿಕ ಮಾವಿನ ಹಣ್ಣು ತಿಂದ ಇಬ್ಬರು ಸಹೋದರಿಯರು ತೀವ್ರ ಅಸ್ವಸ್ಥಗೊಂಡು, ಚಿಕಿತ್ಸೆ ಫಲಿಸದೇ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಔರಾದ್ ತಾಲೂಕಿನ ಶೆಂಬಳ್ಳಿ ಗ್ರಾಮದ ನಿವಾಸಿಗಳಾದ ಭವಾನಿ ವೈಜಿನಾಥ್ ಮೇತ್ರೆ (17) ಹಾಗೂ ಸಂಧ್ಯಾರಾಣಿ ಮೇತ್ರೆ (14) ಮೃತಪಟ್ಟ ದುರ್ದೈವಿಗಳು.
ಘಟನೆಯ ವಿವರ:
ಲಭ್ಯವಿರುವ ಮಾಹಿತಿ ಪ್ರಕಾರ, ಶೆಂಬಳ್ಳಿ ಗ್ರಾಮದ ಇಂದುಮತಿ ಹಾಗೂ ಅವರ ಮೂವರು ಹೆಣ್ಣುಮಕ್ಕಳು ಮನೆಯಲ್ಲಿ ರಾತ್ರಿ ಊಟ ಮುಗಿಸಿದ ನಂತರ ಮಾವಿನ ಹಣ್ಣು ತಿಂದಿದ್ದಾರೆ. ಮಾವಿನ ಹಣ್ಣು ತಿಂದ ಕೆಲವೇ ಸಮಯದಲ್ಲಿ ತಾಯಿ ಹಾಗೂ ಮೂವರು ಹೆಣ್ಣುಮಕ್ಕಳಲ್ಲಿ ತೀವ್ರ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಕುಟುಂಬಸ್ಥರು ತಕ್ಷಣವೇ ಎಲ್ಲರನ್ನೂ ಹೈದರಾಬಾದ್ನ ನಾರಾಯಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭವಾನಿ ಮತ್ತು ಸಂಧ್ಯಾರಾಣಿ ಸಾವನ್ನಪ್ಪಿದ್ದಾರೆ.
ಮತ್ತೊಬ್ಬ ಸಹೋದರಿ ವಿಜಯಶ್ರೀ ಹಾಗೂ ತಾಯಿ ಇಂದುಮತಿ ಅವರ ಸ್ಥಿತಿಯೂ ಗಂಭೀರವಾಗಿದ್ದು, ಸದ್ಯ ಹೈದರಾಬಾದ್ನ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.
ಸಾರ್ವಜನಿಕರಲ್ಲಿ ಮನವಿ: ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣುಗಳನ್ನು ರಾಸಾಯನಿಕ ಬಳಸಿ ಮಾಗಿಸಿರುವ ಸಾಧ್ಯತೆ ಇರುವುದರಿಂದ, ಹಣ್ಣುಗಳನ್ನು ತಿನ್ನುವ ಮುನ್ನ ಚೆನ್ನಾಗಿ ತೊಳೆದು, ಎಚ್ಚರಿಕೆ ವಹಿಸುವಂತೆ ತಜ್ಞರು ಸೂಚಿಸುತ್ತಿದ್ದಾರೆ. ಈ ಘಟನೆಯು ಇಡೀ ಗ್ರಾಮದಲ್ಲಿ ಕಣ್ಣೀರು ತರಿಸಿದೆ.







