ಬೆಂಗಳೂರು : ಧರ್ಮಸ್ಥಳ ಗ್ರಾಮದ ಬಹುಚರ್ಚಿತ ‘ಬುರುಡೆ ಪ್ರಕರಣ’ದ ತನಿಖೆಗೆ ಸಂಬಂಧಿಸಿದಂತೆ ಈಗ ಅತ್ಯಂತ ಮಹತ್ವದ ಹಾಗೂ ಸ್ಫೋಟಕ ತಿರುವು ಸಿಕ್ಕಿದೆ. ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಗೆ ಕುಂದು ತರಲು ಬರೋಬ್ಬರಿ 200 ಕೋಟಿ ರೂಪಾಯಿಗಳ ಬಜೆಟ್ ಇಟ್ಟುಕೊಂಡು ಬೃಹತ್ ಷಡ್ಯಂತ್ರ ರೂಪಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಈ ಇಡೀ ಸಂಚಿನ ಕುರಿತು ಸಮಗ್ರ ತನಿಖಾ ವರದಿ ಸಲ್ಲಿಕೆಗೆ ಕೋರಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಚಿನ್ನ ಸಿ.ಎನ್. (ಚಿನ್ನಯ್ಯ) ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾನೆ. ಅಲ್ಲದೆ ಈ ಒಂದು ಪ್ರಕರಣದಲ್ಲಿ ಬಹುಭಾಷ ನಟ ಪ್ರಕಾಶ್ ರಾಜ್ ಅವರ ಹೆಸರು ಕೂಡ ಚಿನ್ನಯ್ಯ ಉಲ್ಲೇಖಿಸಿದ್ದಾನೆ ಹಾಗಾಗಿ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಪ್ರಕಾಶ್ ರಾಜ್ ಅವರು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಟ್ವೀಟ್ ನಲ್ಲಿ ಏನಿದೆ?
ಎಲ್ಲರಿಗು ನಮಸ್ಕಾರ.. ಮಾಧ್ಯಮಗಳಲ್ಲಿ… ಸಾಮಾಜಿಕ ಜಲತಾಣಗಳಲ್ಲಿ ಧರ್ಮಸ್ತಳ ಪ್ರಕರಣದ ಕುರಿತಂತೆ ನನ್ನ ಬಗ್ಗೆ ಕೆಲವು ಸುದ್ದಿ ಚರ್ಚಿಸಲ್ಪಡುತ್ತಿರುವು ನನ್ನ ಗಮನಕ್ಕೆ ಬಂದಿದೆ. ಇದು ಅತಿ ಸೂಕ್ಷ್ಮವಾದ .. ಮತ್ತು ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಪ್ರಕರಣವಾಗಿರುವುದರಿಂದ ..ಈ ರೀತಿಯ ಅನುಮಾನಗಳಿಗೆ ಉತ್ತರಿಸಬೇಕಾಗಿರುವುದು ನನ್ನ ಕರ್ತವ್ಯವೂ ಆಗಿದೆ .ನಾನು ದೂರದೂರಿನಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ನಾನೇ ಸ್ವತಃ ಬಂದು ಮಾಧ್ಯಮ ಮಿತ್ರರ ಮುಖೇನ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಗಾಳಿಮಾತುಗಳನ್ನು .. ಮತ್ತು ಕೆಲವು ದುರುಳರು ಈ ಸುದ್ದಿಗೆ ಕಟ್ಟಲೆತ್ನಿಸುತ್ತಿರುವ ರೆಕ್ಕೆ ಪುಕ್ಕಗಳನ್ನು ನಂಬದಿರಿ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ?
ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರು, ರಾಜ್ಯ ಸರ್ಕಾರ ಹಾಗೂ ವಿಶೇಷ ತನಿಖಾ ತಂಡಕ್ಕೆ (SIT) ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ತನಿಖೆಯ ಸದ್ಯದ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಎಸ್ಐಟಿಗೆ ಸೂಚಿಸಿ, ವಿಚಾರಣೆಯನ್ನು ಜೂನ್ 29 ಕ್ಕೆ ಮುಂದೂಡಿದ್ದಾರೆ.
ಈ ಷಡ್ಯಂತ್ರದ ಹಿಂದೆ ಅಂತರರಾಜ್ಯ ಮಟ್ಟದ ಆರ್ಥಿಕ ವಹಿವಾಟು ನಡೆದಿರುವ ಬಗ್ಗೆ ಚಿನ್ನಯ್ಯ ಕೋರ್ಟ್ಗೆ ಮಾಹಿತಿ ನೀಡಿದ್ದಾನೆ. ಧರ್ಮಸ್ಥಳದ ವಿರುದ್ಧ ಸುಳ್ಳು ಹಬ್ಬಿಸಲು ಒಟ್ಟು 200 ಕೋಟಿ ರೂಪಾಯಿಗಳ ಬಜೆಟ್ ಸಿದ್ಧವಾಗಿತ್ತು. ಈ ಸಂಚಿನ ಭಾಗವಾಗಿ ನನಗೆ 50 ಲಕ್ಷ ರೂಪಾಯಿ ಕೊಡುವ ಆಮಿಷವನ್ನು ಮಹೇಶ್ ಶೆಟ್ಟಿ ತಿಮರೋಡಿ ಒಡ್ಡಿದ್ದ. ಈ ಷಡ್ಯಂತ್ರಕ್ಕಾಗಿ ಕೇರಳದಿಂದ ಹಣ ಸಂದಾಯವಾಗಿದೆ. ಇದರೊಂದಿಗೆ ಚಿತ್ರದುರ್ಗದ ರಮಾ ನಾಗರಾಜ್ ಎಂಬುವವರೂ ಕೂಡ ಹಣ ನೀಡಿದ್ದಾರೆ. ತಮ್ಮ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವ ಹಾಗೂ ನಗದು ಹಣದ ವಹಿವಾಟಿನ ಸಂಪೂರ್ಣ ವಿವರಗಳನ್ನು ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ.
ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ಯೂಟ್ಯೂಬರ್ಗಳ ಹೆಸರುಗಳು ಉಲ್ಲೇಖವಾಗಿರುವುದು ತೀವ್ರ ಸಂಚಲನ ಮೂಡಿಸಿದೆ. ಗಿರೀಶ್ ಮಟ್ಟೆಣ್ಣವರ್ ಹೇಳಿಕೊಟ್ಟಂತೆ ನೀನು ಹೇಳಿಕೆ ಕೊಡು, 29ನೇ ತಾರೀಕು ಬಂದು ನಿನ್ನನ್ನು ಅಪ್ಪಿಕೊಳ್ಳುತ್ತೇನೆ ಎಂದು ನಟ ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ತಮಗೆ ಹೇಳಿದ್ದರು ಎಂಬುದಾಗಿ ಚಿನ್ನಯ್ಯ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ಜೊತೆಗೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ವಿಠಲಗೌಡ, ಮತ್ತು ಜಯಂತ್ ಈ ಇಡೀ ಷಡ್ಯಂತ್ರದ ಮುಖ್ಯ ರೂವಾರಿಗಳು ಎಂದು ಹೆಸರಿಸಲಾಗಿದೆ. ಯೂಟ್ಯೂಬರ್ಗಳಾದ ಸಮೀರ್ ಎಂ.ಡಿ ಹಾಗೂ ಅಜಯ್ ಅಂಚನ್ ಎಂಬುವವರು ತಮ್ಮ ಸ್ವಾರ್ಥಕ್ಕೆ ಬೇಕಾದ ರೀತಿಯಲ್ಲಿ 30 ರಿಂದ 35 ವೀಡಿಯೋಗಳನ್ನು ಮೊದಲೇ ಮಾಡಿಕೊಂಡಿದ್ದರು. ಅವರು ತೋರಿಸಿದ ಸ್ಥಳಗಳನ್ನೇ ನಾನು ನಂತರ ಎಸ್ಐಟಿ ಅಧಿಕಾರಿಗಳಿಗೆ ತೋರಿಸಬೇಕಾಯಿತು ಎಂದು ಚಿನ್ನಯ್ಯ ದೂರಿದ್ದಾರೆ.
ಎಲ್ಲರಿಗು ನಮಸ್ಕಾರ.. ಮಾಧ್ಯಮಗಳಲ್ಲಿ… ಸಾಮಾಜಿಕ ಜಲತಾಣಗಳಲ್ಲಿ ಧರ್ಮಸ್ತಳ ಪ್ರಕರಣದ ಕುರಿತಂತೆ ನನ್ನ ಬಗ್ಗೆ ಕೆಲವು ಸುದ್ದಿ ಚರ್ಚಿಸಲ್ಪಡುತ್ತಿರುವು ನನ್ನ ಗಮನಕ್ಕೆ ಬಂದಿದೆ. ಇದು ಅತಿ ಸೂಕ್ಷ್ಮವಾದ .. ಮತ್ತು ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಪ್ರಕರಣವಾಗಿರುವುದರಿಂದ ..ಈ ರೀತಿಯ ಅನುಮಾನಗಳಿಗೆ ಉತ್ತರಿಸಬೇಕಾಗಿರುವುದು ನನ್ನ…
— Prakash Raj (@prakashraaj) June 12, 2026








