ದೆಹಲಿಯ ತುಘಲಕಾಬಾದ್ ಎಕ್ಸ್‌ಟೆನ್ಷನ್‌ನಲ್ಲಿ (Tuglakabad Extension) ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪ್ರಸ್ತುತ ದೆಹಲಿಯ ಏಮ್ಸ್ (AIIMS) ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದೆಹಲಿ ಅಗ್ನಿಶಾಮಕ ಸೇವೆ (DFS) ಸಿಬ್ಬಂದಿ ಕಟ್ಟಡದಿಂದ ಆರು ಜನರನ್ನು ರಕ್ಷಿಸಿದ್ದು, ಸೆಂಟ್ರಲೈಸ್ಡ್ ಆಕ್ಸಿಡೆಂಟ್ ಅಂಡ್ ಟ್ರಾಮಾ ಸರ್ವಿಸಸ್ (CATS) ಆಂಬ್ಯುಲೆನ್ಸ್‌ಗಳ ಸಹಾಯದಿಂದ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಅಗ್ನಿಶಾಮಕ ಸೇವೆ (DFS) ಸಿಬ್ಬಂದಿ ಇದುವರೆಗೆ ಒಟ್ಟು ಐದು ಜನರನ್ನು ರಕ್ಷಿಸಿದ್ದಾರೆ.
ಓಖ್ಲಾ ಅಗ್ನಿಶಾಮಕ ಠಾಣೆ-1 (OKH-1) ವ್ಯಾಪ್ತಿಯ ಮಧ್ಯಮ್ ಮಾರ್ಗದ ನಯಾ ತಾರಾ ಅಪಾರ್ಟ್‌ಮೆಂಟ್ ಬಳಿಯ ಗಲ್ಲಿ ನಂ. 1 ರಲ್ಲಿರುವ ಕಟ್ಟಡವೊಂದರಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಮುಂಜಾನೆ 2.35 ರಿಂದ 2.37 ರ ನಡುವೆ ಅಗ್ನಿಶಾಮಕ ದಳಕ್ಕೆ ಹಲವಾರು ತುರ್ತು ಕರೆಗಳು ಬಂದಿದ್ದವು.
ಡಿಎಫ್‌ಎಸ್ (DFS) ಸಹಾಯಕ ವಿಭಾಗೀಯ ಅಧಿಕಾರಿ ಯಶವಂತ್ ಸಿಂಗ್ ಮೀನಾ ಮಾತನಾಡಿ, “ಬೆಂಕಿ ಹೊತ್ತಿಕೊಂಡ ಕಟ್ಟಡವು ನೆಲಮಹಡಿ ಮತ್ತು ಐದು ಮೇಲ್ಮಹಡಿಗಳನ್ನು ಹೊಂದಿತ್ತು. ಇದು ಅತ್ಯಂತ ಕಿರಿದಾದ ಗಲ್ಲಿಯಲ್ಲಿದ್ದರಿಂದ ರಕ್ಷಣೆ ಮತ್ತು ಅಗ್ನಿಶಾಮಕ ಕಾರ್ಯಾಚರಣೆ ನಡೆಸಲು ತೀವ್ರ ತೊಂದರೆಯಾಯಿತು” ಎಂದು ತಿಳಿಸಿದ್ದಾರೆ. ರಕ್ಷಣಾ ತಂಡವು ತಕ್ಷಣವೇ ಮೂರು ವಾಟರ್ ಟೆಂಡರ್‌ಗಳು, ಎರಡು ವಾಟರ್ ಬೌಸರ್‌ಗಳು, ಒಂದು ಬ್ರೀಥಿಂಗ್ ಸಪೋರ್ಟ್ ಯೂನಿಟ್ (ಉಸಿರಾಟದ ಸಹಾಯದ ಘಟಕ) ಮತ್ತು ಕ್ವಿಕ್ ರೆಸ್ಪಾನ್ಸ್ ವಾಹನವನ್ನು ಸ್ಥಳಕ್ಕೆ ರವಾನಿಸಿತ್ತು. ಹೆಚ್ಚಿನ ತುರ್ತು ಕರೆಗಳು ಬಂದ ನಂತರ ಹೆಚ್ಚುವರಿ ಲೈಟ್ ಫೈರ್ ಯೂನಿಟ್ ಅನ್ನು ಸಹ ಕಳುಹಿಸಲಾಯಿತು ಎಂದು ಎಎನ್‌ಐ (ANI) ವರದಿ ಮಾಡಿದೆ.
ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಕಟ್ಟಡದ ಆವರಣದೊಳಗೆ ನಿಲ್ಲಿಸಲಾಗಿದ್ದ ವಾಹನಗಳಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮುಂಜಾನೆ ಸುಮಾರು 3.45 ಕ್ಕೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಜಾನೆ 4:00 ಗಂಟೆಯ ವೇಳೆಗೆ ಡಿಎಫ್‌ಎಸ್ ಅಗ್ನಿಶಾಮಕ ಕಾರ್ಯಾಚರಣೆ ಪೂರ್ಣಗೊಂಡಿರುವುದಾಗಿ ‘ಸ್ಟಾಪ್ ಮೆಸೇಜ್’ (ಕಾರ್ಯಾಚರಣೆ ಮುಕ್ತಾಯದ ಸಂದೇಶ) ಹೊರಡಿಸಿತು. ಆದಾಗ್ಯೂ ಆ ನಂತರವೂ ರಕ್ಷಣಾ ಕಾರ್ಯ ಮುಂದುವರಿದಿತ್ತು ಎಂದು ವರದಿ ತಿಳಿಸಿದೆ.
ಕಾರ್ಯಾಚರಣೆಯ ಅಂತಿಮ ಹಂತದಲ್ಲಿ, ಅಗ್ನಿಶಾಮಕ ಸಿಬ್ಬಂದಿ ಕಟ್ಟಡದಿಂದ ಮತ್ತೊಬ್ಬ ವ್ಯಕ್ತಿಯನ್ನು ರಕ್ಷಿಸಿದರು. ಇದರೊಂದಿಗೆ ಡಿಎಫ್‌ಎಸ್ ಸಿಬ್ಬಂದಿ ರಕ್ಷಿಸಿದ ಒಟ್ಟು ಜನರ ಸಂಖ್ಯೆ ಎಂಟಕ್ಕೆ ಏರಿದೆ.








