ಉತ್ತರ ಪ್ರದೇಶದ ಗೊಂಡಾ (Gonda) ಜಿಲ್ಲೆಯ ಗೊಂಡಾ-ಲಕ್ನೋ ಹೆದ್ದಾರಿಯಲ್ಲಿ ಅಪಘಾತದ ಸಂತ್ರಸ್ತನಿಗೆ ಸಹಾಯ ಮಾಡುತ್ತಿದ್ದ ಗ್ರಾಮಸ್ಥರ ಗುಂಪಿನ ಮೇಲೆ ಎಸ್‌ಯುವಿ (SUV) ಕಾರೊಂದು ಹರಿದ ಪರಿಣಾಮ ಐದು ಜನ ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರದಂದು ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ನಡೆದ ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ನಿರಂಜನ್ ಹೇಳಿದ್ದಾರೆ. ಪೊಲೀಸರ ಪ್ರಕಾರ, ಕರ್ನೈಲ್‌ಗಂಜ್ ತಹಸಿಲ್‌ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ತರ್ಹಾಟಾ ಗ್ರಾಮದ ನಿವಾಸಿ ಸಂಜಯ್ ತಿವಾರಿ (33) ಎಂಬುವವರು ರಾತ್ರಿ ಸುಮಾರು 10.30 ಕ್ಕೆ ತಮ್ಮ ಮೋಟಾರ್ ಸೈಕಲ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಡಂಪರ್ ವಾಹನವೊಂದು ಅವರ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು. ಗ್ರಾಮಸ್ಥರು ಅವರಿಗೆ ಸಹಾಯ ಮಾಡುತ್ತಿದ್ದರು. ರಾತ್ರಿ ಸುಮಾರು 10.45 ರ ವೇಳೆಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಗ್ರಾಮಸ್ಥರು ತಿವಾರಿ ಅವರನ್ನು ರಸ್ತೆಯ ಮತ್ತೊಂದು ಬದಿಗೆ ಕರೆದೊಯ್ಯುತ್ತಿದ್ದಾಗ, ಲಕ್ನೋ ಕಡೆಗೆ ಚಲಿಸುತ್ತಿದ್ದ ದೆಹಲಿ ನೋಂದಣಿಯ ಎಸ್‌ಯುವಿ ಕಾರೊಂದು ನಿಯಂತ್ರಣ ತಪ್ಪಿ, ಅತಿ ವೇಗವಾಗಿ ಬಂದು ಜನರ ಗುಂಪಿಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಡಿವೈಡರ್ ದಾಟಿ ಎದುರು ಬದಿಯ ರಸ್ತೆಯಲ್ಲಿ ಹೋಗಿ ನಿಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜಯ್ ತಿವಾರಿ ಸೇರಿದಂತೆ ಸ್ಥಳದಲ್ಲಿದ್ದ ಒಂಬತ್ತೂ ಜನರನ್ನು ತಕ್ಷಣವೇ ಕರ್ನೈಲ್‌ಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಅಲ್ಲಿ ವೈದ್ಯರು ಹಸನ್ ಮೊಹಮ್ಮದ್ (40), ಅವರ ಸಹೋದರ ಇಮ್ತಿಯಾಜ್ ಅಲಿ (27), ಗುಲ್ಶನ್ (25) ಮತ್ತು ಸಂಜಯ್ ತಿವಾರಿ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಲ್ಶನ್ ಅವರ 10 ವರ್ಷದ ಸೋದರಳಿಯ ಅಂಶುಮಾನ್ ತೀವ್ರವಾಗಿ ಗಾಯಗೊಂಡಿದ್ದರಿಂದ ಆತನನ್ನು ಗೊಂಡಾ ವೈದ್ಯಕೀಯ ಕಾಲೇಜಿಗೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ಸ್ಥಳಾಂತರಿಸಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಆತ ಮೃತಪಟ್ಟಿದ್ದಾನೆ.
ಗಾಯಗೊಂಡಿರುವ ಅಲ್ತಾಫ್ (32) ಅವರಿಗೆ ಚಿಕಿತ್ಸೆ ಮುಂದುವರಿದಿದೆ. ವಿನಯ್ (26), ತಬ್ರೇಜ್ (20) ಮತ್ತು ಪರ್ವೇಜ್ (18) ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಅಪರ ಪೊಲೀಸ್ ವರಿಷ್ಠಾಧಿಕಾರಿ (ASP) ರಾಧೇ ಶ್ಯಾಮ್ ರೈ ಮಾತನಾಡಿ, “ಎಸ್‌ಯುವಿ ಕಾರಿನ ಚಾಲಕ ಮತ್ತು ಅದರ ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದ್ದಾರೆ.








