ಬೆಂಗಳೂರು: ಆರೋಪಗಳು ಎಷ್ಟೇ ಗಂಭೀರವಾಗಿದ್ದರೂ ಸಹ ವ್ಯಕ್ತಿಯೊಬ್ಬರ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕ ಮಾಹಿತಿಯಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ. ಒಬ್ಬ ವ್ಯಕ್ತಿಯು ಸರ್ಕಾರಿ ಅಧಿಕಾರಿಯಾಗಿದ್ದ ಮಾತ್ರಕ್ಕೆ ಆತನ ವೈಯಕ್ತಿಕ ಆಸ್ತಿ ಮತ್ತು ಜವಾಬ್ದಾರಿಗಳ (ಹೊಣೆಗಾರಿಕೆಗಳು) ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಬಹಿರಂಗಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸೆಕ್ಷನ್ 8(1)(ಜೆ) ಅಡಿ ವಿನಾಯಿತಿ
ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದ ವೈಯಕ್ತಿಕ ಮಾಹಿತಿಗಳನ್ನು ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(ಜೆ) ಅಡಿಯಲ್ಲಿ ಬಹಿರಂಗಪಡಿಸುವಿಕೆಯಿಂದ ಮುಕ್ತಗೊಳಿಸಲಾಗಿದೆ ಎಂದು ನ್ಯಾಯಪೀಠ ನೆನಪಿಸಿದೆ. ಇಂತಹ ಖಾಸಗಿ ವಿವರಗಳನ್ನು ಒದಗಿಸುವಂತೆ ಒತ್ತಾಯಿಸುವುದಕ್ಕೆ ಕಾನೂನಿನ ರಕ್ಷಣೆ ಇಲ್ಲ ಎಂದು ತಿಳಿಸಿರುವ ಹೈಕೋರ್ಟ್, ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯೊಂದನ್ನು ವಜಾಗೊಳಿಸಿದೆ. ಬೆಂಗಳೂರಿನ ನಿವಾಸಿಯಾದ ಎಸ್ ಸಾವಿತ್ರಮ್ಮ ಎಂಬುವರು ಮಾಹಿತಿ ಆಯೋಗದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ವಂಚನೆ ಆರೋಪ ಮತ್ತು ಪ್ರಕರಣದ ಹಿನ್ನೆಲೆ
ಪ್ರಕರಣದ ಹಿನ್ನೆಲೆಯ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್‌ಆರ್‌ಟಿಸಿ) 1990 ರಿಂದ 2002ರ ಅವಧಿಯಲ್ಲಿ ಕೇಂದ್ರ ಕಚೇರಿಯ ಡೆಪ್ಯುಟಿ ಕಂಟ್ರೋಲರ್ ಆಗಿ ಎಸ್.ಪಿ. ಜಯಪಾಲ್ ಎಂಬುವರು ಸೇವೆ ಸಲ್ಲಿಸುತ್ತಿದ್ದರು. ಈ ಅಧಿಕಾರಿಯು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ವಂಚನೆ ಎಸಗಿ, ಮಾರಾಟ ಮಾಡಿದ್ದಾರೆ ಎಂದು ಅರ್ಜಿದಾರರಾದ ಸಾವಿತ್ರಮ್ಮ ಆರೋಪಿಸಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿವಿಲ್ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮತ್ತು ದಾವೆ ಬಾಕಿ ಇದೆ.
ಆಸ್ತಿ ವಿವರ ಕೋರಿ ಆರ್‌ಟಿಐ ಅರ್ಜಿ
ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಹಿನ್ನೆಲೆಯಲ್ಲಿ, ತಮಗೆ ಜಯಪಾಲ್ ಅವರ ಆಸ್ತಿಯ ವಿವರಗಳು ಬೇಕಾಗವೆ ಎಂದು ಕೋರಿ ಸಾವಿತ್ರಮ್ಮ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಜಯಪಾಲ್ ಅವರಿಗೆ ಸಂಬಂಧಿಸಿದಂತೆ 1997 ರಿಂದ 2005ರವರೆಗಿನ ಆಸ್ತಿ ಮತ್ತು ಹೊಣೆಗಾರಿಕೆಗಳ ಸಂಪೂರ್ಣ ವಿವರಗಳನ್ನು ನೀಡುವಂತೆ ಕೆಎಸ್‌ಆರ್‌ಟಿಸಿ ಮಾಹಿತಿ ಅಧಿಕಾರಿಗೆ ಮನವಿ ಮಾಡಿದ್ದರು. ಆದರೆ, ಈ ಮಾಹಿತಿಯನ್ನು ನೀಡಲು ನಿಗಮದ ಅಧಿಕಾರಿಗಳು ನಿರಾಕರಿಸಿದ್ದರು.
ಕೆಎಸ್‌ಆರ್‌ಟಿಸಿ ಮತ್ತು ಮಾಹಿತಿ ಆಯೋಗದ ನಿಲುವು
ಸಾವಿತ್ರಮ್ಮ ಅವರ ಅರ್ಜಿಗೆ ಉತ್ತರಿಸಿದ್ದ ಕೆಎಸ್‌ಆರ್‌ಟಿಸಿ ಮಾಹಿತಿ ಅಧಿಕಾರಿ, ಜಯಪಾಲರ ಆಸ್ತಿಯ ವಿವರಗಳು ಅವರ ವೈಯಕ್ತಿಕ ವಿಚಾರಗಳಾಗಿವೆ. ಅಲ್ಲದೆ, ಈ ಮಾಹಿತಿಗೂ ಸಾರ್ವಜನಿಕ ಹಿತಾಸಕ್ತಿಗೂ ಯಾವುದೇ ಸಂಬಂಧವಿಲ್ಲದ ಕಾರಣ ಇದನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಧಿಕಾರಿಗಳ ಈ ಕ್ರಮವನ್ನು ಕರ್ನಾಟಕ ಮಾಹಿತಿ ಆಯೋಗವೂ ಸಹ ಎತ್ತಿಹಿಡಿದಿತ್ತು. ಹೀಗಾಗಿ ಮಾಹಿತಿ ಆಯೋಗದ ಆದೇಶದ ವಿರುದ್ಧ ಸಾವಿತ್ರಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ವಾದ ತಳ್ಳಿಹಾಕಿದ ನ್ಯಾಯಾಲಯ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, “ಅರ್ಜಿದಾರರು ಕೋರಿರುವ ಆಸ್ತಿಯ ಮಾಹಿತಿಯನ್ನು ಜಯಪಾಲ್ ಅವರು ತಾವು ಸಲ್ಲಿಸಿರುವ ಆದಾಯ ತೆರಿಗೆ (ಐಟಿ ರಿಟರ್ನ್ಸ್) ವಿವರಗಳಲ್ಲಿ ಬಹಿರಂಗಪಡಿಸಿರಲಿಲ್ಲ. ಆದ್ದರಿಂದ ಇದನ್ನು ವೈಯಕ್ತಿಕ ಮಾಹಿತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಮಾಹಿತಿ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು” ಎಂದು ಪ್ರಬಲವಾಗಿ ವಾದಿಸಿದರು. ಆದರೆ, ಈ ವಾದವನ್ನು ಒಪ್ಪದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಖಾಸಗಿ ಮಾಹಿತಿಯನ್ನು ಆರ್‌ಟಿಐ ಅಡಿ ನೀಡಲಾಗದು ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿತು.








