ಚಿಕ್ಕಮಗಳೂರು : ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ನ್ಯಾಯಾಲಯದ ಎದುರು ಶರಣಾಗಿದ್ದಾನೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಪದವಿ ಪೂರ್ವ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಬೇಲೂರು ಮೂಲದ ಯುವಕನೊಬ್ಬ ಅತ್ಯಾಚಾರ ನಡೆಸಿದ್ದ. ಈ ಸಂಬಂಧ ಆತನ ವಿರುದ್ಧ ಈ ಹಿಂದೆಯೇ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆತ ಜೈಲು ಸೇರಿದ್ದಾನೆ. ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದಳು.
ಈ ನಡುವೆ, ಜೈಲು ಸೇರಿರುವ ಯುವಕ ಹಾಗೂ ಅಪ್ರಾಪ್ತೆಯ ಫೋಟೋಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡಿದ್ದ ಮೂಡಿಗೆರೆ ತಾಲೂಕಿನ ಗ್ರಾಮವೊಂದರ ಐವರು ಆರೋಪಿಗಳು, ಆ ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ಅಪ್ರಾಪ್ತೆಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಅಪ್ರಾಪ್ತೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.
ಅಪ್ರಾಪ್ತೆ ನೀಡಿದ ದೂರಿನ ಮೇರೆಗೆ ಗೋಣಿಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ನ್ಯಾಯಾಲಯದ ಎದುರು ಶರಣಾಗಿದ್ದಾನೆ. ಐವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಎಲ್ಲ ಆರೋಪಿಗಳು ಮೂಡಿಗೆರೆ ತಾಲೂಕಿನ ಗ್ರಾಮವೊಂದರ ನಿವಾಸಿಗಳು ಎನ್ನಲಾಗಿದೆ.








