ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ (PoJK) ವಿವಿಧ ಭಾಗಗಳಿಂದ ಬಂದ ಸಾವಿರಾರು ಜನರು ರಾವಲಾಕೋಟ್‌ನಲ್ಲಿ ಜಮಾಯಿಸಿ, ಆ ಪ್ರದೇಶದಲ್ಲಿ ಪಾಕಿಸ್ತಾನದ ನಿರಂತರ ಆಕ್ರಮಣ ಮತ್ತು ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಇತ್ತೀಚಿನ ಪ್ರತಿಭಟನೆಗಳ ವೇಳೆ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎನ್ನಲಾದ ನಾಗರಿಕರಿಗೆ ನ್ಯಾಯ ಒದಗಿಸಬೇಕು ಎಂದು ಬುಧವಾರದಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಲವು ಗಂಟೆಗಳ ಕಾಲ ನಡೆದ ಈ ಸಮಾವೇಶದಲ್ಲಿ ಭಾಗವಹಿಸಿದ್ದವರು ಬ್ಯಾನರ್‌ಗಳನ್ನು ಹಿಡಿದು ಉತ್ತರದಾಯಿತ್ವ, ನಾಗರಿಕ ಹಕ್ಕುಗಳು ಮತ್ತು ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಈ ರಾಲಿಯನ್ನುದ್ದೇಶಿಸಿ ಸ್ಥಳೀಯ ರಾಜಕೀಯ ಮುಖಂಡರು ಮತ್ತು ‘ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ (JAAC) ಪ್ರತಿನಿಧಿಗಳು ಮಾತನಾಡಿದರು. ಪ್ರತಿಭಟನೆಗಳನ್ನು ಅಧಿಕಾರಿಗಳು ನಿರ್ವಹಿಸಿದ ರೀತಿಯನ್ನು ತೀವ್ರವಾಗಿ ಟೀಕಿಸಿದ ಅವರು, ವರದಿಯಾಗಿರುವ ಸಾವು-ನೋವುಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಅಲ್ಲದೆ, ಅಂತರರಾಷ್ಟ್ರೀಯ ಸಮುದಾಯ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಇಲ್ಲಿನ ಪರಿಸ್ಥಿತಿಯನ್ನು ಗಮನಿಸಬೇಕು ಮತ್ತು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಕೊಡಿಸಲು ಒತ್ತಡ ಹೇರಬೇಕು ಎಂದು ಭಾಷಣಕಾರರು ಆಗ್ರಹಿಸಿದರು.








