ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಪ್ರಮುಖ ಗ್ರಾಮಗಳಾದ ಉಳ್ಳೂರು, ಕಾಸ್ಪಾಡಿ, ಐಗಿನ್ ಬೈಲು ಮತ್ತು ಹೊಸೂರು ಮುಂತಾದ ಕಡೆಗಳಲ್ಲಿ ಸಾರಿಗೆ ಇಲಾಖೆಯ ಬಸ್ಸುಗಳು ನಿಲ್ಲದೆ ಹಾಗೇ ಸಾಗುತ್ತಿರುವುದನ್ನು ಖಂಡಿಸಿ, ಗ್ರಾಮಸ್ಥರು ಸಾಗರ ಕೆಎಸ್ಆರ್ಟಿಸಿ (KSRTC) ಡಿಪೋಗೆ ಭೇಟಿ ನೀಡಿ ಅಧಿಕಾರಿಗಳಿಗೆ ತೀವ್ರ ಆಕ್ರೋಶದೊಂದಿಗೆ ಮನವಿ ಸಲ್ಲಿಸಿದರು.
ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರ ಪರದಾಟ:
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಈ ಭಾಗದ ಗ್ರಾಮಸ್ಥರಿಗೆ ಹಾಗೂ ದಿನನಿತ್ಯ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳೇ ಏಕೈಕ ಆಸರೆಯಾಗಿದೆ. ಆದರೆ, ಚಾಲಕರು ಮತ್ತು ನಿರ್ವಾಹಕರು ನಿಗದಿತ ನಿಲ್ದಾಣಗಳಿದ್ದರೂ ಬಸ್ಗಳನ್ನು ನಿಲ್ಲಿಸದೇ ನಿರ್ಲಕ್ಷ್ಯದಿಂದ ಮುನ್ನಡೆಯುತ್ತಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆ ತಲುಪಲಾಗದೆ ಹಾಗೂ ಗ್ರಾಮಸ್ಥರು ತುರ್ತು ಕೆಲಸಗಳಿಗೆ ಹೋಗಲಾಗದೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಹಲವಾರು ಬಾರಿ ಮನವಿ ನೀಡಿದರೂ ಇಲ್ಲದ ಕ್ರಮ:
ಈ ಹಿಂದೆಯೂ ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದು ಹಲವಾರು ಬಾರಿ ಲಿಖಿತ ಮನವಿಗಳನ್ನು ನೀಡಲಾಗಿದ್ದರೂ, ಸಾರಿಗೆ ಇಲಾಖೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇಲಾಖೆಯ ಈ ಸರಣಿ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಗ್ರಾಮಸ್ಥರು ಇಂದು ನೇರವಾಗಿ ಡಿಪೋಗೆ ಧಾವಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನಾದರೂ ಇಲಾಖೆ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ಸುಗಳು ಕಡ್ಡಾಯವಾಗಿ ನಿಲ್ಲುವಂತೆ ಕ್ರಮ ಜರುಗಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ವಸೀಮ್, ಶರತ್, ದುರ್ಗಪ್ಪ, ಹರಿದ್ರ ಕುಮಾರ್, ಚೌಡಪ್ಪಣ್ಣ, ಹರೀಶ್ ಗೌಡ, ಲೋಕೇಶ್, ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.








