ಹೈದರಾಬಾದ್ : ಹೈದರಾಬಾದ್ ನ ನಾರಾಯಣಗುಡ ಪ್ರದೇಶದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಆತಂಕಕ್ಕೆ ಕಾರಣವಾಗಿದೆ. ಮಾವಿನಹಣ್ಣು ಸೇವಿಸಿದ ಬಳಿಕ ತೀವ್ರ ಅನಾರೋಗ್ಯಕ್ಕೆ ಒಳಗಾದ ಇಬ್ಬರು ಸಹೋದರಿಯರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕುಟುಂಬದ ಇನ್ನೂ ಮೂವರು ಸದಸ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.
ಏನಿದು ಘಟನೆ?
ಪೊಲೀಸರ ಮಾಹಿತಿ ಪ್ರಕಾರ, ಮೂಲತಃ ಕರ್ನಾಟಕದ ಬೀದರ್ ಜಿಲ್ಲೆಯವರಾದ ವೈಜಿನಾಥ್ ಮತ್ತು ಇಂದುಮತಿ ದಂಪತಿ ಉದ್ಯೋಗದ ನಿಮಿತ್ತ ಹೈದರಾಬಾದ್‌ಗೆ ವಲಸೆ ಬಂದು ವಿಠಲ್‌ವಾಡಿ ಪ್ರದೇಶದಲ್ಲಿ ನೆಲೆಸಿದ್ದರು.
ಇತ್ತೀಚೆಗೆ ಅವರ ಸಂಬಂಧಿ ರೇಣುಕಾ ಅವರು ಮನೆಗೆ ಭೇಟಿ ನೀಡುವ ವೇಳೆ ನಾರಾಯಣಗುಡ ಜಲಮಂಡಳಿ ಸಮೀಪದ ಅಂಗಡಿಯೊಂದರಿಂದ ಮಾವಿನಹಣ್ಣುಗಳನ್ನು ಖರೀದಿಸಿ ಕುಟುಂಬಕ್ಕೆ ನೀಡಿದ್ದರು. ಬಳಿಕ ಆ ಹಣ್ಣುಗಳನ್ನು ಇಂದುಮತಿ ಹಾಗೂ ಅವರ ನಾಲ್ವರು ಪುತ್ರಿಯರು ಸೇವಿಸಿದ್ದರು.
ವಾಂತಿ-ಭೇದಿಯಿಂದ ಆಸ್ಪತ್ರೆ ದಾಖಲು
ಭಾನುವಾರ ಸಂಜೆ ಹಣ್ಣು ಸೇವಿಸಿದ ಕೆಲವೇ ಸಮಯದಲ್ಲಿ ಐವರಿಗೂ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಕಾಚಿಗೂಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಯಿತು.
ಆದರೆ ಚಿಕಿತ್ಸೆ ಫಲಿಸದೆ ವೈಜಿನಾಥ್ ಅವರ ಮೂರನೇ ಪುತ್ರಿ ಭುವನೇಶ್ವರಿ (17) ಸೋಮವಾರ ಮೃತಪಟ್ಟಿದ್ದಾಳೆ. ಈ ದುಃಖದ ನಡುವೆಯೇ ಮಂಗಳವಾರ ಚಿಕಿತ್ಸೆ ಪಡೆಯುತ್ತಿದ್ದ ಕಿರಿಯ ಪುತ್ರಿ ಸಂಧ್ಯಾ (10) ಕೂಡ ಕೊನೆಯುಸಿರೆಳೆದಿದ್ದಾಳೆ.
ಇನ್ನೂ ಮೂವರ ಚಿಕಿತ್ಸೆ ಮುಂದುವರಿಕೆ
ತಾಯಿ ಇಂದುಮತಿ ಸೇರಿದಂತೆ ಉಳಿದ ಇಬ್ಬರು ಪುತ್ರಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅವರ ಆರೋಗ್ಯದ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.
ಸಂಧ್ಯಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣ ದಾಖಲು, ತನಿಖೆ ಆರಂಭ
ಕುಟುಂಬದವರ ದೂರಿನ ಆಧಾರದ ಮೇಲೆ ನಾರಾಯಣಗುಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಘಟನೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಮಾವಿನಹಣ್ಣಿನ ಗುಣಮಟ್ಟ, ಆಹಾರ ವಿಷಬಾಧೆ ಅಥವಾ ಇತರೆ ಕಾರಣಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ








