ದಕ್ಷಿಣ ಲಂಡನ್ನ ಎತ್ತರದ ವಸತಿ ಸಂಕೀರ್ಣವೊಂದರ ಬಾಲ್ಕನಿಯಿಂದ ಬಿದ್ದು, ಭಾರತೀಯ ಮೂಲದ ದಂಪತಿ ಮತ್ತು ಅವರ ಒಂಬತ್ತು ವರ್ಷದ ಪುತ್ರ ಮೃತಪಟ್ಟಿರುವ ದುರಂತ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 27 ರಂದು 46 ಅಂತಸ್ತಿನ ಐಷಾರಾಮಿ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ.
ಎತ್ತರದಿಂದ ಜನರು ಬಿದ್ದಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ತುರ್ತು ಸೇವೆಗಳನ್ನು ಕರೆಯಲಾಯಿತು. ಅಂಬ್ಯುಲೆನ್ಸ್ ಸಿಬ್ಬಂದಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, 47 ವರ್ಷದ ರಾಕೇಶ್ ಪೈ, 46 ವರ್ಷದ ಪತ್ನಿ ಅದಿತಿ ಪಾರಲ್ಕರ್ ಮತ್ತು ಅವರ ಪುತ್ರ ಸಿಡ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಈ ಕುಟುಂಬವು ಕಟ್ಟಡದ 36ನೇ ಮಹಡಿಯಲ್ಲಿ ವಾಸಿಸುತ್ತಿತ್ತು.
ಪೊಲೀಸರು ಈ ಸಾವುಗಳನ್ನು “ಅನಿರೀಕ್ಷಿತ” (unexpected) ಎಂದು ಕರೆದಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಮೆಟ್ರೋಪಾಲಿಟನ್ ಪೊಲೀಸ್ ವಕ್ತಾರರು ಮಾತನಾಡಿ, “ಅವರ ಸಾವುಗಳನ್ನು ಸದ್ಯಕ್ಕೆ ಅನಿರೀಕ್ಷಿತ ಎಂದು ಪರಿಗಣಿಸಲಾಗುತ್ತಿದೆ. ಬೇರೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಮೃತಪಟ್ಟವರನ್ನು ಔಪಚಾರಿಕವಾಗಿ ಗುರುತಿಸುವ ಕೆಲಸ ನಡೆಯುತ್ತಿದೆ. ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ವಿಶೇಷ ಅಧಿಕಾರಿಗಳು ಅವರಿಗೆ ಬೆಂಬಲ ನೀಡುತ್ತಿದ್ದಾರೆ,” ಎಂದು ಹೇಳಿದ್ದಾರೆ.
ಸ್ಥಳೀಯ ಸಂಸದ ನೀಲ್ ಕೋಯ್ಲ್ ಅವರು ಮಾತನಾಡಿ, ಬಾಲಕನಿಗೆ ಇದ್ದ ಗಂಭೀರ ಆರೋಗ್ಯ ಸಮಸ್ಯೆಗಳು ಈ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ನಿವಾಸಿಗಳಿಗೆ ಬರೆದ ಪತ್ರದಲ್ಲಿ ಕೋಯ್ಲ್, “ಇದು ಭಯಾನಕ ದುರಂತ. ಮೂವರ ಕುಟುಂಬವೊಂದು ಕೊನೆಯಾಗಿದೆ. ಇದು ಬಹಳ ಅಮಾನವೀಯ. ಕೆಲವರು ಇದನ್ನು ಕಣ್ಣಾರೆ ಕಂಡಿದ್ದಾರೆ. ಬಾಲಕನು ಹುಟ್ಟಿನಿಂದಲೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದನು, ಇದು ಅವರು ತೆಗೆದುಕೊಂಡ ಈ ಕಠಿಣ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ,” ಎಂದು ಬರೆದಿದ್ದಾರೆ.
ವರದಿಗಳ ಪ್ರಕಾರ, ‘ಆದಿ’ ಮತ್ತು ‘ರಾಬಿನ್’ ಎಂದು ಸ್ನೇಹಿತರಿಗೆ ಪರಿಚಿತರಾಗಿದ್ದ ಈ ದಂಪತಿ ಹಣಕಾಸು ಮತ್ತು ನಿರ್ಮಾಣ ಸಲಹಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಸಿಡ್ನ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಕುಟುಂಬವು 2020 ರಲ್ಲಿ ಭಾರತಕ್ಕೆ ಪ್ರಯಾಣಿಸಿತ್ತು ಮತ್ತು 2025 ರಲ್ಲಿ ಯುಕೆ ಗೆ ಮರಳಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.
ಆದಾಗ್ಯೂ, ಈ ಸಾವುಗಳು ಕೊಲೆ-ಆತ್ಮಹತ್ಯೆಯ ಪರಿಣಾಮವಾಗಿರಬಹುದು ಎಂಬ ಊಹೆಯನ್ನು ಕುಟುಂಬಕ್ಕೆ ಹತ್ತಿರವಿರುವ ಕೆಲವರು ಪ್ರಶ್ನಿಸಿದ್ದಾರೆ. ಸ್ನೇಹಿತರೊಬ್ಬರು ಟೆಲಿಗ್ರಾಫ್ಗೆ ತಿಳಿಸಿದಂತೆ, “ಇದು ನಮಗೆ ಅರ್ಥವಾಗುತ್ತಿಲ್ಲ. ಅದಿತಿ ಮಾನಸಿಕವಾಗಿ ತೀವ್ರ ಒತ್ತಡದಲ್ಲಿದ್ದದ್ದು ಸ್ಪಷ್ಟವಾಗಿತ್ತು, ಆದರೆ ರಾಬಿನ್ ಬಹಳ ಸಂಯಮದ ವ್ಯಕ್ತಿಯಾಗಿದ್ದರು. ಸಿಡ್ನ ಅನಾರೋಗ್ಯ ಮತ್ತು ಅವರು ಅನುಭವಿಸುತ್ತಿದ್ದ ಒತ್ತಡದ ನಡುವೆಯೂ ರಾಬಿನ್ ಎಲ್ಲವನ್ನೂ ನಿಭಾಯಿಸುತ್ತಿದ್ದರು,” ಎಂದು ಹೇಳಿದ್ದಾರೆ.
ಕುಟುಂಬಕ್ಕೆ ಹತ್ತಿರವಿರುವ ಮತ್ತೊಬ್ಬರು, ಸಿಡ್ನ ಆರೈಕೆಯು ಅದಿತಿಯ ಮಾನಸಿಕ ಆರೋಗ್ಯದ ಮೇಲೆ “ದೊಡ್ಡ ಮಟ್ಟದ ಪರಿಣಾಮ” ಬೀರಿದೆ ಎಂದು ತಿಳಿಸಿದ್ದಾರೆ. ನೆರೆಯ ನಿವಾಸಿ ಒಬ್ಬರು ಕೂಡ, ಕಳೆದ ಕೆಲವು ವಾರಗಳಿಂದ ಆ ಕುಟುಂಬದ ಅಪಾರ್ಟ್ಮೆಂಟ್ನಿಂದ “ಕಿರುಚಾಟ ಮತ್ತು ಕೂಗಾಟ” ಕೇಳಿಸುತ್ತಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನರ್ ಸೌತ್ ಲಂಡನ್ನ ಹಿರಿಯ ಕರೋನರ್ ಜೂಲಿಯನ್ ಮೋರಿಸ್, ಈ ಪ್ರಕರಣವನ್ನು ತಮ್ಮ ಕಚೇರಿಗೆ ವರ್ಗಾಯಿಸಲಾಗಿದೆ ಎಂದು ದೃಢಪಡಿಸಿದ್ದಾರೆ. “ಈ ವಿಷಯವು ನಮ್ಮ ಕಚೇರಿಗೆ ಉಲ್ಲೇಖಿಸಲ್ಪಟ್ಟಿದೆ. ಮೆಟ್ರೋಪಾಲಿಟನ್ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ ಮತ್ತು ಅಗತ್ಯವಿರುವಲ್ಲಿ ನಾವು ನೆರವು ನೀಡುತ್ತಿದ್ದೇವೆ,” ಎಂದು ಅವರು ತಿಳಿಸಿದರು. ಸಾವುಗಳಿಗೆ ಸಂಬಂಧಿಸಿದ ಸಂದರ್ಭಗಳು ಇನ್ನೂ ತನಿಖೆಯ ಹಂತದಲ್ಲಿವೆ.








