ವೈಜ್ಞಾನಿಕ ಸಂಶೋಧನೆಗಳ ಮೂಲಕ ಪಡೆದ ಸಾಕ್ಷ್ಯಾಧಾರಗಳು ದೈನಂದಿನ ವೈದ್ಯಕೀಯ ಚಿಕಿತ್ಸಾ ಪದ್ಧತಿ (Clinical practice) ಮತ್ತು ಸಾರ್ವಜನಿಕ ನೀತಿಗಳಲ್ಲಿ ಅಳವಡಿಕೆಯಾಗಲು ಸರಾಸರಿ 17 ವರ್ಷಗಳ ಕಾಲಾವಧಿ ಬೇಕಾಗುತ್ತದೆ ಎಂದು ಐಸಿಎಂಆರ್ನ (ICMR) ವಿಜ್ಞಾನಿ-ಜಿ ಮತ್ತು ವಿತರಣಾ ಮತ್ತು ಅನುಷ್ಠಾನ ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ಆಶು ಗ್ರೋವರ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನುಷ್ಠಾನ ಸಂಶೋಧನೆಗೆ (Implementation research) ಹೆಚ್ಚಿನ ಗಮನಹರಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
’ಬ್ರಿಂಗಿಂಗ್ ಎವಿಡೆನ್ಸ್ ಇನ್ ಟು ಪಬ್ಲಿಕ್ ಹೆಲ್ತ್ ಪಾಲಿಸಿ’ (EPHP) ಸಮ್ಮೇಳನದಲ್ಲಿ ಮಾತನಾಡಿದ ಡಾ. ಗ್ರೋವರ್, “ಭಾರತದ ವೈವಿಧ್ಯಮಯ ಜನಸಂಖ್ಯೆ ಮತ್ತು ಸಂದರ್ಭಗಳು, ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ವ್ಯವಸ್ಥೆಗಳ ಮಿಶ್ರಣ, ನೀತಿ ಮತ್ತು ಆಚರಣೆಯ ನಡುವಿನ ಅಂತರ ಹಾಗೂ ಹೊಸ ಆವಿಷ್ಕಾರಗಳನ್ನು ದೊಡ್ಡ ಮಟ್ಟದಲ್ಲಿ ಜಾರಿಗೆ ತರುವ ಸವಾಲುಗಳನ್ನು ಗಮನಿಸಿದರೆ, ಅನುಷ್ಠಾನದ ಮೇಲೆ ನಾವು ಗಮನ ಹರಿಸುವುದು ಮುಖ್ಯವಾಗಿದೆ,” ಎಂದರು.
ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (IPH), ಬೆಂಗಳೂರು; ಐಐಎಂ ಬೆಂಗಳೂರು (IIMB); ದಿ ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ (GIGH) ಇಂಡಿಯಾ ಮತ್ತು ಆಂಟ್ವರ್ಪ್ನ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಡಿಸಿನ್ (ITM) ಸಹಯೋಗದಲ್ಲಿ ಆಯೋಜಿಸಲಾದ ಈ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವು ಜೂನ್ 8 ರಂದು ಪ್ರಾರಂಭವಾಯಿತು.
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ ಅವರು, ಆರೋಗ್ಯ ನೀತಿ ನಿರೂಪಣೆ ಮತ್ತು ಅನುಷ್ಠಾನದ ನಡುವಿನ ಅಂತರವನ್ನು ಎತ್ತಿ ತೋರಿಸಿದರು. “ನೀತಿ ನಿರೂಪಣೆಯಲ್ಲಿ ಸಾಕ್ಷ್ಯಾಧಾರಗಳ ಬಳಕೆಯ ಕೊರತೆಯಿದೆ. ಮಾತೃ ಮರಣಗಳನ್ನು ದಾಖಲಿಸಲು ನಾವು ಸಮಗ್ರ ವ್ಯವಸ್ಥೆಯನ್ನು ಹೊಂದಿದ್ದೇವೆ ಮತ್ತು ದತ್ತಾಂಶವನ್ನು ಕಡ್ಡಾಯವಾಗಿ ಸಂಗ್ರಹಿಸಲಾಗುತ್ತದೆ. ಆದರೆ, ದತ್ತಾಂಶವಿದ್ದರೂ, ಮೂಲ ಕಾರಣಗಳನ್ನು ಪತ್ತೆಹಚ್ಚಲು ಅಥವಾ ಅದಕ್ಕೆ ಅನುಗುಣವಾಗಿ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ,” ಎಂದು ಅವರು ವಿಷಾದಿಸಿದರು.
ಶ್ರೀ ಚಿತ್ರ ತಿರುನಾಳ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿಯ ಪ್ರಾಧ್ಯಾಪಕಿ ಮತ್ತು ಐಪಿಎಚ್ನ ಆಡಳಿತ ಮಂಡಳಿಯ ಸದಸ್ಯೆ ಡಾ. ಸುಂದರಿ ರವೀಂದ್ರನ್ ಮಾತನಾಡಿ, ಆರೋಗ್ಯ ನೀತಿ ಮತ್ತು ವ್ಯವಸ್ಥೆಯ ಸುಧಾರಣೆಗಳಿಗೆ ಮಾರ್ಗದರ್ಶನ ನೀಡಲು ಸಾರ್ವಜನಿಕ ಆರೋಗ್ಯ ಸಂಶೋಧನೆಯು ವಾಸ್ತವಿಕ ನೆಲೆಯಿಂದ ಪ್ರಬಲ ಸಾಕ್ಷ್ಯಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು. ನೀತಿಗಳ ಅಳವಡಿಕೆಯು ವಾಸ್ತವಿಕ ಪರಿಸ್ಥಿತಿಗಳಿಗೆ ಅನುಗುಣವಾಗಿರಲು, ನೈಜ-ಪ್ರಪಂಚದ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುವ ಸಾಕ್ಷ್ಯಗಳ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ಆರೋಗ್ಯದ ಮೇಲೆ ವಾಣಿಜ್ಯ ನಿರ್ಧಾರಕಗಳ (Commercial Determinants of Health – CDoH) ಕುರಿತಾದ ತಜ್ಞರ ಅಧಿವೇಶನದಲ್ಲಿ, ಉತ್ಪನ್ನಗಳು, ಸೇವೆಗಳು, ನಿಗಮಗಳು ಮತ್ತು ಜಾಗತಿಕ ಶಕ್ತಿಗಳು ಸೇರಿದಂತೆ ಬಾಹ್ಯ ಅಂಶಗಳು ಹೇಗೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂಬುದನ್ನು ಚರ್ಚಿಸಲಾಯಿತು.
ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ನ ಹಿರಿಯ ಫೆಲೋ ಡಾ. ಉಪೇಂದ್ರ ಭೋಜಾನಿ ಮಾತನಾಡಿ, “ಸಂಸ್ಕರಿಸಿದ ಆಹಾರ ಉತ್ಪನ್ನಗಳು, ಆಹಾರ ಸಂಗ್ರಹಕಾರರು (food aggregators) ಮತ್ತು ತಂಬಾಕಿನಂತಹ ಉತ್ಪನ್ನಗಳನ್ನು ಕಾನೂನುಬದ್ಧವಾಗಿ ಮಾರಾಟ ಮಾಡುವ ಜಾಗತಿಕ ವಾಣಿಜ್ಯ ಸಂಸ್ಥೆಗಳು CDoH ನ ಚಾಲಕಗಳಾಗಿವೆ,” ಎಂದು ತಿಳಿಸಿದರು.
ಒಂದೇ ಬ್ರಾಂಡ್ ಹೆಸರಿನಡಿ ಕಾನೂನುಬದ್ಧವಾಗಿ ಅನುಮತಿಸಲಾದ ಇತರ ಉತ್ಪನ್ನಗಳ ಮೂಲಕ ಮದ್ಯ, ತಂಬಾಕು ಅಥವಾ ಜೂಜಿನಂತಹ ನಿರ್ಬಂಧಿತ ಉತ್ಪನ್ನಗಳನ್ನು ಉತ್ತೇಜಿಸಲು ಬಳಸುವ ಮಾರ್ಕೆಟಿಂಗ್ ತಂತ್ರವಾದ ‘ಸರ್ೋಗೇಟ್ ಅಡ್ವರ್ಟೈಸಿಂಗ್’ (Surrogate advertising) ಕೂಡ ಗ್ರಾಹಕರ ಆರೋಗ್ಯದ ಮೇಲೆ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಸೇರಿಸಿದರು.








