ಬೆಂಗಳೂರು: ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಿಗೆ ನೀಡಲಾಗುತ್ತಿದ್ದ ಅಂಚೆ ರಿಯಾಯಿತಿಯನ್ನು ಮರುಸ್ಥಾಪಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಪತ್ರಿಕೆಗಳು ಮತ್ತು ನಿಯತಕಾಲಿಕಗಳಿಗೆ ಸಮಸ್ಯೆಯಾಗಿರುವ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಬಗೆಹರಿಸಬೇಕೆಂದು ಮನವಿ ಮಾಡಿದ್ದಾರೆ.
ಅಂಚೆ ಇಲಾಖೆಯ PO ORDER-PO/01/2024 (ದಿನಾಂಕ 16 ಡಿಸೆಂಬರ್ 2024) ಆದೇಶದ ಪ್ರಕಾರ, ಅಂಚೆ ರಿಯಾಯಿತಿಗೆ ಅರ್ಹತೆ ಪಡೆಯಲು ಪತ್ರಿಕೆಗಳು ಪ್ರತಿದಿನ ಅಥವಾ ಕನಿಷ್ಠ ವಾರಕ್ಕೊಮ್ಮೆ ಪ್ರಕಟವಾಗಬೇಕು ಎಂಬ ಹೊಸ ಮಾನದಂಡ ಜಾರಿಗೆ ಬಂದಿದೆ. ಇದರ ಪರಿಣಾಮವಾಗಿ ಪಾಕ್ಷಿಕ ಹಾಗೂ ಮಾಸಿಕ ನೋಂದಾಯಿತ ನಿಯತಕಾಲಿಕೆಗಳು ರಿಯಾಯಿತಿ ಸೌಲಭ್ಯದಿಂದ ವಂಚಿತವಾಗಿವೆ ಎಂದು ಕೆಯುಡಬ್ಲ್ಯೂಜೆ ತಿಳಿಸಿದೆ.
ಈ ಕ್ರಮದಿಂದ ಸಣ್ಣ ಮತ್ತು ಮಧ್ಯಮ ಪ್ರಕಾಶಕರಿಗೆ ಭಾರೀ ಆರ್ಥಿಕ ಹೊರೆ ಉಂಟಾಗಿದೆ. ಹಿಂದೆ ಸುಮಾರು 50 ಪೈಸೆ ದರದಲ್ಲಿ ವಿತರಣೆ ಮಾಡುತ್ತಿದ್ದ ಪ್ರತಿಗಳಿಗೆ ಈಗ ₹4 ರಿಂದ ₹5ರವರೆಗೆ ಅಂಚೆ ಶುಲ್ಕ ಪಾವತಿಸಬೇಕಾಗಿದ್ದು, ವಿತರಣಾ ವೆಚ್ಚದಲ್ಲಿ ಹತ್ತು ಪಟ್ಟು ಹೆಚ್ಚಳವಾಗಿದೆ ಎಂದು ಪ್ರಕಾಶಕರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಸಮಸ್ಯೆಗಳು, ಸಾಮಾಜಿಕ ಜಾಗೃತಿ, ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಪಾಕ್ಷಿಕ ಹಾಗೂ ಮಾಸಿಕ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಗ್ರಾಮೀಣ ಜನತೆ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಪ್ರಕಟಣೆಗಳು ಡಿಜಿಟಲ್ ಮಾಧ್ಯಮದ ಪ್ರವೇಶವಿಲ್ಲದ ಓದುಗರಿಗೆ ಪ್ರಮುಖ ಮಾಹಿತಿ ಮೂಲಗಳಾಗಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಚಾರಿಕ ನಿಯತಕಾಲಿಕೆಗಳು ಸಮಾಜದ ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಪ್ರಸಾರದಲ್ಲೂ ಮಹತ್ವದ ಕೊಡುಗೆ ನೀಡುತ್ತಿವೆ. ಹೀಗಾಗಿ ಪ್ರಕಟಣೆಯ ಅವಧಿಯನ್ನು ಆಧಾರವಾಗಿಟ್ಟುಕೊಂಡು ರಿಯಾಯಿತಿ ನಿರಾಕರಿಸುವ ಬದಲು, ಎಲ್ಲಾ ನೋಂದಾಯಿತ ನಿಯತಕಾಲಿಕೆಗಳಿಗೆ ಅಂಚೆ ರಿಯಾಯಿತಿ ಸೌಲಭ್ಯವನ್ನು ಮರುಸ್ಥಾಪಿಸಬೇಕು ಎಂದು ತಗಡೂರು ಅವರು ಮನವಿ ಮಾಡಿದ್ದಾರೆ.
ಈ ಕುರಿತು ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆ ಆದೇಶವನ್ನು ಮರುಪರಿಶೀಲಿಸಿ, ದೇಶದಾದ್ಯಂತದ ಸಾವಿರಾರು ಸಣ್ಣ ಮತ್ತು ಮಧ್ಯಮ ಪ್ರಕಾಶಕರ ಹಿತಾಸಕ್ತಿಯನ್ನು ಕಾಪಾಡುವಂತೆಯೂ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ
ಒತ್ತಾಯಿಸಿದ್ದಾರೆ.








