ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದ ಆನೇಕಲ್‌ನಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಸಂಚು ರೂಪಿಸಿದ್ದ ಭಾರಿ ಕಳ್ಳಬೇಟೆಗಾರರ ಜಾಲವೊಂದನ್ನು ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ಭೇದಿಸಿದ್ದಾರೆ. ಆನೇಕಲ್ ವಲಯ ಅರಣ್ಯಾಧಿಕಾರಿಗಳ (RFO) ನೇತೃತ್ವದ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ, ಒಟ್ಟು 7 ಮಂದಿ ಖತರ್ನಾಕ್ ಕಳ್ಳಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ತಟ್ಟೆಕೆರೆ ಅರಣ್ಯ ಪ್ರದೇಶದಲ್ಲಿ ದಾಳಿ ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಆನೇಕಲ್ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತಂಡವು, ತಟ್ಟೆಕೆರೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹೊಂಚು ಹಾಕಿ ಕುಳಿತಿದ್ದರು. ಈ ವೇಳೆ ಸ್ಕಾರ್ಪಿಯೋ ಕಾರಿನಲ್ಲಿ ಅನುಮಾನಾಸ್ಪದವಾಗಿ ಬಂದಿಳಿದ 7 ಮಂದಿಯ ತಂಡವನ್ನು ಸುತ್ತುವರೆದು ವಶಕ್ಕೆ ಪಡೆದಿದ್ದಾರೆ. ಅರಣ್ಯದೊಳಗೆ ನುಗ್ಗಿ ಮೂಕ ಪ್ರಾಣಿಗಳನ್ನು ಬೇಟೆಯಾಡಲು ಇವರು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ಸುರಿ ಕಾರು, ಬೇಟೆ ಪರಿಕರಗಳು ವಶಕ್ಕೆ ಬಂಧಿತರಿಂದ ಬೇಟೆಯಾಡಲು ಬಳಸುತ್ತಿದ್ದ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ವನ್ಯಜೀವಿಗಳನ್ನು ಕೊಲ್ಲಲು ಅಕ್ರಮವಾಗಿ ತಂದಿದ್ದ ಮಾರಕಾಸ್ತ್ರಗಳು ಹಾಗೂ ಬೇಟೆಗೆ ಬಳಸುವ ಇತರ ನಿಷೇಧಿತ ವಸ್ತುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಒಂದು ದೊಡ್ಡ ಮಟ್ಟದ ವನ್ಯಜೀವಿ ಹತ್ಯಾಕಾಂಡ ತಪ್ಪಿದಂತಾಗಿದೆ.
ನಾಲ್ವರಿಗೆ ಬೇಟೆಯಾಡುವುದೇ ವೃತ್ತಿ! ಅಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ತಲ್ಲಣಗೊಳಿಸುವ ಮಾಹಿತಿಯೊಂದು ಹೊರಬಿದ್ದಿದೆ. ಬಂಧಿತ 7 ಆರೋಪಿಗಳ ಪೈಕಿ ನಾಲ್ವರು ಸರಣಿ ಅಪರಾಧಿಗಳಾಗಿದ್ದು, ವನ್ಯಜೀವಿಗಳನ್ನು ಬೇಟೆಯಾಡುವುದನ್ನೇ ತಮ್ಮ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದರು. ಇವರು ಕಾಡುಪ್ರಾಣಿಗಳನ್ನು ಕೊಂದು ಅವುಗಳ ಮಾಂಸ ಹಾಗೂ ಚರ್ಮವನ್ನು ದುಬಾರಿ ಬೆಲೆಗೆ ಕದ್ದು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ಯಾದಗಿರಿ, ಕನಕಪುರ ಮೂಲದ ಆರೋಪಿಗಳು ಬಂಧಿತ ಆರೋಪಿಗಳ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಇವರಲ್ಲಿ ನಾಲ್ವರು ಯಾದಗಿರಿ ಜಿಲ್ಲೆಯ ಮೂಲದವರೆಂದು ತಿಳಿದುಬಂದಿದೆ. ಇನ್ನುಳಿದ ಮೂವರು ಸ್ಥಳೀಯ ಪ್ರದೇಶಗಳಾದ ಕನಕಪುರ ಮತ್ತು ಹಾರೋಹಳ್ಳಿಯ ನಿವಾಸಿಗಳಾಗಿದ್ದಾರೆ. ಇವರೆಲ್ಲರೂ ಸೇರಿ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಆನೇಕಲ್ ಭಾಗದ ಅರಣ್ಯವನ್ನು ಟಾರ್ಗೆಟ್ ಮಾಡಿದ್ದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್ ಸದ್ಯ ಬಂಧಿತ ಏಳೂ ಇಲಾಖೆಯ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ (Wildlife Protection Act) ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಅರಣ್ಯಾಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಸದ್ಯ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಜಾಲದ ಹಿಂದೆ ಬೇರೆ ಯಾರಾದರೂ ಕೈವಾಡವಿದೆಯೇ ಎಂಬ ಬಗ್ಗೆ ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.








