ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ತನ್ನ ಫಲಿತಾಂಶೋತ್ತರ ಸೇವೆಗಳ ಪೋರ್ಟಲ್ ಅನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಸೈಬರ್ ದಾಳಿಗಳ ಕುರಿತು ಶುಕ್ರವಾರ ದೆಹಲಿ ಪೊಲೀಸರ ವಿಶೇಷ ಘಟಕಕ್ಕೆ ಅಧಿಕೃತ ದೂರು ನೀಡಿದೆ. ಆದರೆ, ಈ ಎಲ್ಲಾ ದಾಳಿಗಳನ್ನು ಯಶಸ್ವಿಯಾಗಿ ತಡೆಯಲಾಗಿದ್ದು, ಯಾವುದೇ ರೀತಿಯ ಡೇಟಾ ಸೋರಿಕೆ ಅಥವಾ ಮಾಹಿತಿ ದುರ್ಬಳಕೆಯಾಗಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಜೂನ್ 2 ರಂದು ಆರಂಭವಾಗಿದ್ದ ಈ ಪೋರ್ಟಲ್, 12 ನೇ ತರಗತಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಮತ್ತು ಪರಿಶೀಲನೆಗೆ ಅವಕಾಶ ಕಲ್ಪಿಸಿತ್ತು. ಕಳೆದ ಮೂರು ದಿನಗಳಿಂದ ಈ ಪೋರ್ಟಲ್ ಮೇಲೆ ವ್ಯವಸ್ಥಿತ ಮತ್ತು ಸಂಘಟಿತ ಸೈಬರ್ ದಾಳಿಗಳು ನಡೆದಿವೆ ಎಂದು ಸಿಬಿಎಸ್‌ಇ ತಿಳಿಸಿದೆ.
ಭಾರೀ ಟ್ರಾಫಿಕ್ ಸೃಷ್ಟಿ: ದೇಶ ಮತ್ತು ವಿದೇಶಗಳ ವಿವಿಧ ಐಪಿ (IP) ವಿಳಾಸಗಳಿಂದ ಪೋರ್ಟಲ್‌ಗೆ ಭಾರೀ ಪ್ರಮಾಣದ ನಕಲಿ ಟ್ರಾಫಿಕ್ ಹರಿಸುವ ಮೂಲಕ ದಾಳಿ ನಡೆಸಲಾಗಿದೆ.
ವ್ಯವಸ್ಥೆ ಅಸ್ತವ್ಯಸ್ತಗೊಳಿಸುವ ಯತ್ನ: ವ್ಯವಸ್ಥೆಯನ್ನು ಅಸ್ಥಿರಗೊಳಿಸುವುದು, ವಿದ್ಯಾರ್ಥಿಗಳಿಗೆ ಪೋರ್ಟಲ್ ಸಿಗದಂತೆ ತಡೆಯುವುದು ಮತ್ತು ಕಾನೂನುಬಾಹಿರವಾಗಿ ಮಾಹಿತಿ ಕದಿಯುವುದು ದಾಳಿಕೋರರ ಉದ್ದೇಶವಾಗಿತ್ತು ಎಂದು ಮಂಡಳಿ ಹೇಳಿದೆ.
ಸಾರ್ವಜನಿಕ ಅಶಾಂತಿಗೆ ಯತ್ನ: ಲಕ್ಷಾಂತರ ವಿದ್ಯಾರ್ಥಿಗಳು ಈ ಪೋರ್ಟಲ್ ಬಳಸುತ್ತಿರುವುದರಿಂದ, ಇದರಲ್ಲಿ ವ್ಯತ್ಯಯ ಉಂಟುಮಾಡಿ ವಿದ್ಯಾರ್ಥಿಗಳಲ್ಲಿ ಅಸಮಾಧಾನ ಮತ್ತು ಸಾರ್ವಜನಿಕವಾಗಿ ಗೊಂದಲ ಮೂಡಿಸಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
“ದಾಳಿಯ ಸ್ವರೂಪ ಮತ್ತು ತೀವ್ರತೆಯನ್ನು ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ದೆಹಲಿ ಪೊಲೀಸರ ‘ಇಂಟೆಲಿಜೆನ್ಸ್ ಫ್ಯೂಷನ್ ಅಂಡ್ ಸ್ಟ್ರಾಟಜಿಕ್ ಆಪರೇಷನ್ಸ್’ (IFSO) ಘಟಕಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದೆ.
ದಾಳಿಗಳ ಹೊರತಾಗಿಯೂ ಸಿಬಿಎಸ್‌ಇಯ ಡೇಟಾಬೇಸ್ ಸಂಪೂರ್ಣ ಸುರಕ್ಷಿತವಾಗಿದೆ. ಐಐಟಿ ಕಾನ್ಪುರ, ಐಐಟಿ ಮದ್ರಾಸ್, ಡಿಜಿಟಲ್ ಇಂಡಿಯಾ ಕಾರ್ಪೊರೇಷನ್, ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ಮತ್ತು CERT-In ಸಂಸ್ಥೆಗಳ ಸೈಬರ್ ತಜ್ಞರ ನೆರವಿನೊಂದಿಗೆ 24 ಗಂಟೆಯೂ ನಿರಂತರ ನಿಗಾ ವಹಿಸಿ ದಾಳಿಯನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ ಎಂದು ಮಂಡಳಿ ಭರವಸೆ ನೀಡಿದೆ.
ಮತ್ತೊಂದೆಡೆ, ಸಿಬಿಎಸ್‌ಇ ಅಪ್‌ಲೋಡ್ ಮಾಡಿರುವ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳು ತಮ್ಮ ಕೈಬರಹಕ್ಕೆ ಹೋಲಿಕೆಯಾಗುತ್ತಿಲ್ಲ ಎಂದು ಕೆಲವು 12 ನೇ ತರಗತಿ ವಿದ್ಯಾರ್ಥಿಗಳು ಆರೋಪಿಸಿದ್ದು, ಒಎಸ್‌ಎಂ (OSM) ಮೌಲ್ಯಮಾಪನ ವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಒಎಸ್‌ಎಂ ವ್ಯವಸ್ಥೆಯ ಖರೀದಿ ಪ್ರಕ್ರಿಯೆಯ ತನಿಖೆಗಾಗಿ ಕ್ಯಾಬಿನೆಟ್ ಸಚಿವಾಲಯವು ಈಗಾಗಲೇ ಏಕಸದಸ್ಯ ಸಮಿತಿಯನ್ನು ರಚಿಸಿದೆ.








