ಫಿರೋಜ್ಪುರ (ಪಂಜಾಬ್): ಪಂಜಾಬ್ನ ಫಿರೋಜ್ಪುರ-ಫಾಜಿಲ್ಕಾ ರಸ್ತೆಯಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. 28 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ಟ್ರಕ್ ಮತ್ತು ಟ್ರೈಲರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಈ ದುರಂತ ನಡೆದಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ, ಮೃತರನ್ನು ಜಲಾಲಾಬಾದ್ ಮೂಲದ ಒಂದೇ ಕುಟುಂಬದ ಸದಸ್ಯರು ಮತ್ತು ಅವರ ಆಪ್ತ ಸಂಬಂಧಿಕರು ಎಂದು ಗುರುತಿಸಲಾಗಿದೆ. ವೃದ್ಧೆಯೊಬ್ಬರ ನಿಧನದ ನಂತರದ ಉತ್ತರ ಕ್ರಿಯೆಗಳನ್ನು ಮುಗಿಸಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಮೂವರು ಪುರುಷರು ಮತ್ತು ಒಬ್ಬ ಮಹಿಳೆ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹಾಗೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ರವಾನಿಸಲಾಯಿತು. ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಫರೀದ್ಕೋಟ್ನ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸಂಸ್ಥೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ನಿಖರವಾದ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತ ಒಂದೇ ಕುಟುಂಬದ ಹಲವರನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.








