ಬೆಂಗಳೂರು: ರಾಜ್ಯ ವಿಧಾನ ಪರಿಷತ್ (Legislative Council) ಚುನಾವಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಕೊನೆ ಕ್ಷಣದಲ್ಲಿ ಬಿಗ್ ಟ್ವಿಸ್ಟ್ ನೀಡಿದೆ. ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಹೈಕಮಾಂಡ್ ಇದೀಗ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ಕಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿನಯ್ ಕಾರ್ತಿಕ್ ಅವರನ್ನು ಕಾಂಗ್ರೆಸ್ ತನ್ನ 5ನೇ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಕಣಕ್ಕಿಳಿಸಿದೆ.
ಡಿಕೆಶಿ ರಾಜತಾಂತ್ರಿಕ ನಡೆ?
ಪಕ್ಷದ ಸಂಖ್ಯಾಬಲದ ಆಧಾರದ ಮೇಲೆ ನಿಗದಿತ ಸೀಟುಗಳಿಗಿಂತ ಹೆಚ್ಚಿನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಡಿ.ಕೆ. ಶಿವಕುಮಾರ್ ಅವರ ಆಪ್ತರಾಗಿರುವ ವಿನಯ್ ಕಾರ್ತಿಕ್ ಅವರಿಗೆ ಮಣೆ ಹಾಕಿರುವುದು ಸದ್ಯದ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಪರೋಕ್ಷವಾಗಿ ತಲೆನೋವು ತಂದಿಡುವ ಸಾಧ್ಯತೆ ಇದೆ.
ಕಾಂಗ್ರೆಸ್‌ನ ಈ ಐದನೇ ಅಭ್ಯರ್ಥಿಯ ಎಂಟ್ರಿಯಿಂದಾಗಿ ವಿಧಾನ ಪರಿಷತ್ ಚುನಾವಣೆ ಈಗ ಕೇವಲ ಔಪಚಾರಿಕವಾಗಿ ಉಳಿಯದೆ, ತೀವ್ರ ಪೈಪೋಟಿಯ ಮತ್ತು ‘ಕೈ’ ನಾಯಕರ ತಂತ್ರ-ಪ್ರತಿತಂತ್ರಗಳ ಅಖಾಡವಾಗಿ ಮಾರ್ಪಟ್ಟಿದೆ. ವಿನಯ್ ಕಾರ್ತಿಕ್ ಅವರ ಸ್ಪರ್ಧೆಯು ಮುಂಬರುವ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.








