ಮೈಸೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗವು “ತಾಯಿ ಭೂಮಿಯ ಮುಂದೆ ಇರುವ ಸವಾಲುಗಳು – ಹವಾಮಾನ ಬದಲಾವಣೆ” ಎಂಬ ವಿಷಯದೊಂದಿಗೆ 15 ಮೇ 2026ರಿಂದ 05 ಜೂನ್ 2026ರವರೆಗೆ ನಡೆದ ವಿಶ್ವ ಪರಿಸರ ದಿನಾಚರಣೆ–2026 ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅಭಿಯಾನದ ಉದ್ದೇಶವು ರೈಲ್ವೆ ಸಿಬ್ಬಂದಿ, ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದಾಗಿತ್ತು.
ಈ ಅಭಿಯಾನವನ್ನು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಉದ್ಘಾಟಿಸಿ, ಪರಿಸರ ಪ್ರತಿಜ್ಞೆಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಬೋಧಿಸಿದರು. ಮೈಸೂರು, ದಾವಣಗೆರೆ, ಶಿವಮೊಗ್ಗ ಟೌನ್, ಹರಿಹರ, ಅರಸೀಕೆರೆ, ಸಕಲೇಶಪುರ, ಕಬಕ ಪುತ್ತೂರು, ಅಶೋಕಪುರಂ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಸ್ವಚ್ಛತಾ ಅಭಿಯಾನಗಳು, ಪ್ಲಾಸ್ಟಿಕ್ ವಿರೋಧಿ ಜಾಗೃತಿ ಕಾರ್ಯಕ್ರಮಗಳು, ಜಾಥಾಗಳು ಹಾಗೂ ಮನೆ ಮನೆಗೆ ಭೇಟಿ ನೀಡಿ ಕಸದ ವಿಂಗಡಣೆ ಮತ್ತು ಸರಿಯಾದ ವಿಲೇವಾರಿ ಕುರಿತು ಜಾಗೃತಿ ಮೂಡಿಸಲಾಯಿತು. ನೀರಿನ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಉತ್ತೇಜಿಸುವ ಕಾರ್ಯಗಳನ್ನು ಘೋಷಣೆಗಳ ಮೂಲಕ ಮತ್ತು ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಳ್ಳಲಾಯಿತು.

ಮೈಸೂರು ರೈಲ್ವೆ ವಸ್ತುಸಂಗ್ರಹಾಲಯ, ಲಲಿತಾ ಶಾಲೆ ಹಾಗೂ ಅಶೋಕಪುರಂ ವರ್ಕ್‌ಶಾಪ್‌ನಲ್ಲಿ ಚಿತ್ರಕಲೆ, ರೇಖಾಚಿತ್ರ ಹಾಗೂ ಪ್ರಶ್ನೋತ್ತರ ಸ್ಪರ್ಧೆಗಳು ಆಯೋಜಿಸಲಾಯಿತು. ಕುಕ್ಕರಹಳ್ಳಿ ಕೆರೆಯ ಬಳಿ ನಡೆದ ನಡಿಗೆ ಜಾಥ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಡೆದ ನೂಕಡ್ ನಾಟಕವು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿತು.
ಜೂನ್ 05ರಂದು ಮೈಸೂರು ರೈಲ್ವೆ ಆಸ್ಪತ್ರೆ, ರೈಲ್ವೆ ಮ್ಯೂಸಿಯಂ, ಅಧಿಕಾರಿಗಳ ಕಾಲೊನಿ ಹಾಗೂ ಇತರ ಸ್ಥಳಗಳಲ್ಲಿ ಸಸಿಗಳ ನೆಡುವ ಕಾರ್ಯಕ್ರಮಗಳು ನಡೆಯಿತು. ಚಾಮುಂಡಿ ಕ್ಲಬ್, ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಿತು, ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಅಭಿಯಾನದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು, ಪರಿಸರ ಸಂರಕ್ಷಣೆ ಹಾಗೂ ಸದೃಢ ಅಭಿವೃದ್ಧಿಯತ್ತ ಮೈಸೂರು ವಿಭಾಗದ ಬದ್ಧತೆಯನ್ನು ಮತ್ತೊಮ್ಮೆ ತೋರಿಸಿತು.








